
ಕಾಂಗ್ರೆಸ್ ಪಕ್ಷ ಚುನಾವಣಾ ಸಮಯದಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನು, ಸರ್ಕಾರ ರಚಿಸಿದ ಮೇಲೆ ಜಾರಿ ಮಾಡಲು ತೆಗೆದುಕೊಂಡ ಹದಿನೈದು ದಿನಗಳ ಅವಧಿಯಲ್ಲಿ, ಮನೆಯಿಂದ ಈಚೆಗೆದ್ದು ಬಂದ ಸೋತ ಬಿಜೆಪಿ ಎಮ್ಮೆಲ್ಲೆಗಳು, ಗ್ಯಾರಂಟಿಗಳನ್ನು ತಕ್ಷಣವೇ ಜಾರಿ ಮಾಡದಿದ್ದರೆ ಹೋರಾಟ ಮಾಡುತ್ತೇವೆ ಎಂದಿದ್ದರು. ದಳದ ಕುಮಾರಣ್ಣನವರು ಬೀದಿಗಿಳಿಯುವ ಬೆದರಿಕೆ ಹಾಕಿದರು. ಇದಾವುದಕ್ಕೂ ಕಿವಿಗೊಡದ ಸಿದ್ದು ಟೀಮು ಗ್ಯಾರಂಟಿಗಳನ್ನು ಜಾರಿ ಮಾಡಿಯೇಬಿಟ್ಟಿತು. ಇದರಿಂದ ಆಘಾತಗೊಂಡಂತಾದ ಟಿ.ವಿ ಮಾಧ್ಯಮದವರು ಸರಕಾರವನ್ನು ಅಕಾರಣವಾಗಿ ಟೀಕಿಸುವ ಅಡ್ನಾಡಿಗಳನ್ನು ತಂದು ಕೂರಿಸಿಕೊಂಡು ಎರಡು ಸಾವಿರ ರೂಗಳಿಂದ ಅತ್ತೆ ಸೊಸೆ ಜಗಳ ಶುರುವಾಗುತ್ತೆ, ಲಕ್ಷ ರೂಗಳ ಸಂಬಳ ತೆಗೆಯುವ ಕೆಲ ಮಹಿಳೆಯರಿಗೆ 2000 ಕೊಡುವುದು ಎಷ್ಟು ಸರಿ, ಈ ಭಾಗ್ಯಗಳಿಂದ ದೇಶ ದಿವಾಳಿಯಾಗುತ್ತೆ, ಇವುಗಳ ಮುಂದುವರಿಕೆ ಸಾಧ್ಯವಿಲ್ಲ ಎಂದು ಬೊಬ್ಬೆ ಹೊಡೆದವಲ್ಲ. ಸಾಮಾನ್ಯವಾಗಿ ಬಿಜೆಪಿ ಮನಸ್ಸುಗಳು ಬಡವರು ಸಫಲರಾಗುವುದನ್ನು ಸಹಿಸುವುದಿಲ್ಲವಂತಲ್ಲಾ, ಥೂತ್ತೇರಿ.

ಬಿಜೆಪಿ ಮನಸ್ಸುಗಳಿಗೆ ಗ್ಯಾರಂಟಿ ಭಾಗ್ಯಗಳನ್ನು ಏಕೆ ಸಹಿಸಲಾಗುವುದಿಲ್ಲ ಎಂದರೆ ಅವರ ಧರ್ಮಗುರುವಾದ ಗೋಳವಲಕರ ಬಡವರ ಉದ್ಧಾರದ ವಿರೋಧಿ; ಬಡವರು ಅದರಲ್ಲೂ ಶೋಷಿತಜಾತಿ ಜನರಿಗೆ ಯಾವ ಸವಲತ್ತನ್ನು ಕೊಡಬಾರದು, ಅವರು ಉನ್ನತ ಹುದ್ದೆಗೆ ಬರದಂತೆ ನೋಡಿಕೊಳ್ಳಬೇಕು, ಅವರು ಎ.ಸಿ ಮತ್ತು ಡಿ.ಸಿ ಹಾಗೂ ತಹಸೀಲ್ದಾರನಾಗದಂತೆ ನೋಡಿಕೊಳ್ಳಬೇಕು, ನಿಮ್ಮನ್ನ ನೋಡಿದ ಕೂಡಲೇ ಅವರು ನಿಮ್ಮ ಪಾದ ನೋಡುತ್ತ ನಿಲ್ಲಬೇಕು, ಅದು ಬಿಟ್ಟು ಸರಿಸಮಾನರಾಗಿ ವರ್ತಿಸಬಾರದು, ಬಡವರು ಮತ್ತು ಕೆಳಜಾತಿಗಳು ಎಂದಿನವರೆಗೆ ಬಡವರಾಗಿರುತ್ತಾರೊ ಅಲ್ಲಿಯವರೆಗೆ ನೀವು ಸುಖವಾಗಿರುತ್ತೀರಿ ತಿಳಿಯಿರಿ ಎಂದು ಆತ ಹೇಳಿದ್ದಾನೆ. ಈ ವೇದವಾಕ್ಯ ಅವರ ಬರವಣಿಗೆಯಲ್ಲಿ ದಾಖಲಾಗಿದೆ. ಅನುಮಾನಗೊಂಡವರು ಗೋಳವಲಕರನನ್ನ ಓದಬಹುದು. ಅದನ್ನು ಓದಿಕೊಂಡ ಬಿಜೆಪಿಗಳು ಗ್ಯಾರಂಟಿ ಜಾರಿಯಾದಂದಿನಿಂದ ನಿದ್ದೆಯನ್ನೆ ಕಳೆದುಕೊಂಡು, ಗ್ಯಾರಂಟಿ ನಂಬಬೇಡಿ ಎಂದು ಕೂಗಾಡುತ್ತ ತಿರುಗುತ್ತಿವೆಯಂತಲ್ಲಾ, ಥೂತ್ತೇರಿ.
