
ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳ ಅರ್ಜಿ ಸಲ್ಲಿಕೆಯನ್ನು ಸರಳವಾಗಿಸಲು ಕಂದಾಯ ಇಲಾಖೆ ನೇಮಿಸುವ ಸಿಬ್ಬಂದಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ
ಬೆಂಗಳೂರು (ಜೂ.10): ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳ ಅರ್ಜಿ ಸಲ್ಲಿಕೆಯನ್ನು ಸರಳವಾಗಿಸಲು ಕಂದಾಯ ಇಲಾಖೆ ನೇಮಿಸುವ ಸಿಬ್ಬಂದಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕಾಗಿ ಕಂದಾಯ ಇಲಾಖೆ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಯೋಜನೆ ಅಡಿಯಲ್ಲಿ 1.30 ಕೋಟಿ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. ಎರಡು ತಿಂಗಳೊಳಗೆ ಅರ್ಜಿಗಳನ್ನು ಸ್ವೀಕರಿಸಿ, ವಿಲೇವಾರಿ ಮಾಡಬೇಕಿದ್ದು, ಅದು ಸವಾಲಿನ ಕೆಲಸವಾಗಿದೆ.

ಇಡೀ ವರ್ಷದಲ್ಲಿ ಕಂದಾಯ ಇಲಾಖೆ 1.50 ಕೋಟಿಯಷ್ಟು ಅರ್ಜಿಗಳನ್ನು ವಿಲೇವಾರಿ ಮಾಡುತ್ತದೆ. ಆದರೆ, ಎರಡು ತಿಂಗಳಲ್ಲಿ ಅಷ್ಟೇ ಪ್ರಮಾಣದ ಅರ್ಜಿಗಳನ್ನು ವಿಲೇವಾರಿ ಮಾಡಬೇಕಿದ್ದು, ಅದಕ್ಕಾಗಿ ಈಗಾಗಲೆ ತಯಾರಿ ನಡೆಸಲಾಗಿದೆ ಎಂದರು. ರಾಜ್ಯದಲ್ಲಿನ 898 ನಾಡ ಕಚೇರಿ ಸೇರಿದಂತೆ 7 ಸಾವಿರಕ್ಕೂ ಹೆಚ್ಚಿನ ಸೇವಾಸಿಂಧು ಕಚೇರಿ, ಬಾಪೂಜಿ ಸೇವಾ ಕೇಂದ್ರ (ಗ್ರಾಮ ಒನ್ ಕೇಂದ್ರ), ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಜೂನ್ 15ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ನಾಡಕಚೇರಿಗಳಲ್ಲಿ ಸೂಕ್ತ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಫಲಾನುಭವಿಗಳು ಒಮ್ಮೆಲೇ ಅರ್ಜಿ ಸಲ್ಲಿಸಲು ಬಂದು ಗೊಂದಲ ಸೃಷ್ಟಿಯಾಗುವುದನ್ನು ತಡೆಯಲು, ಆನ್‌ಲೈನ್ ಮತ್ತು ಮೊಬೈಲ್ ಆ್ಯಪ್ ಮೂಲಕವೂ ಅರ್ಜಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು. ಕಂದಾಯ ಇಲಾಖೆ ಜತೆಗೆ ಕೃಷಿ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಫೀಲ್ಡ್ ಸಿಬ್ಬಂದಿಗಳನ್ನು ಅರ್ಜಿ ಸ್ವೀಕಾರ ಕಾರ್ಯದಲ್ಲಿ ಬಳಸಿಕೊಳ್ಳಲಾಗುವುದು. ಅವರುಗಳು ಫಲಾನುಭವಿಗಳ ಮನೆಗೆ ತೆರಳಿ ಆ್ಯಪ್ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿಕೊಂಡು ಸಲ್ಲಿಕೆ ಮಾಡಲಿದ್ದಾರೆ. ಅದಕ್ಕಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.
