Hayath Tv|

ಒಡಿಶಾದ ಜಾಜ್‌ಪುರ ರೈಲು ನಿಲ್ದಾಣದ ಬಳಿ ಬುಧವಾರ ಗೂಡ್ಸ್ ರೈಲಿನಡಿ ಸಿಲುಕಿ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಒಬ್ಬ ಕಾರ್ಮಿಕ ಗಾಯಗೊಂಡಿದ್ದಾನೆ.
ಭುವನೇಶ್ವರ: ಒಡಿಶಾದ ಬಾಲಸೋರ್ ಭೀಕರ ರೈಲು ಅಪಘಾತದ (Odisha Train Accident) ಕಹಿ ನೆನೆಪು ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಒಡಿಶಾದ ಜಾಜ್‌ಪುರ ರೈಲು ನಿಲ್ದಾಣದ ಬಳಿ ಬುಧವಾರ ಗೂಡ್ಸ್ ರೈಲಿನಡಿ ಸಿಲುಕಿ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಒಬ್ಬ ಕಾರ್ಮಿಕ ಗಾಯಗೊಂಡಿದ್ದಾನೆ. ಈ ಕಾರ್ಮಿಕರು ಗೂಡ್ಸ್ ರೈಲಿನ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದರು. ಅಷ್ಟರಲ್ಲಿ ರೈಲು ಚಲಿಸಿದ್ದು ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಒಡಿಶಾದ ಬಾಲಸೋರ್‌ನಲ್ಲಿ ಸರಣಿ ರೈಲು ಅಪಘಾತ ಸಂಭವಿಸಿದ 5 ದಿನಗಳ ನಂತರ ಈ ಘಟನೆ ನಡೆದಿದೆ.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಈ ಕಾರ್ಮಿಕರು ಸಮೀಪದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಭಾರೀ ಮಳೆ ಪ್ರಾರಂಭವಾಯಿತು. ಮಳೆಯಿಂದ ರಕ್ಷಣೆ ಪಡೆಯಲು, ಗೂಡ್ಸ್ ರೈಲಿನ ಬಿಡ್ ಅಡಿಯಲ್ಲಿ ಆಶ್ರಯ ಪಡೆಯಲು ನಿರ್ಧರಿಸಿದರು. ಒಬ್ಬೊಬ್ಬರಾಗಿ ಎಲ್ಲ ಕಾರ್ಮಿಕರು ಗೂಡ್ಸ್ ರೈಲಿನ ಬೋಗಿಯ ಕೆಳಗೆ ಹೋದರು. ಕೂಲಿ ಕಾರ್ಮಿಕರು ರೈಲಿನ ಬೋಗಿಯ ಕೆಳಗೆ ಕುಳಿತಿದ್ದ ಅದೇ ಸಮಯಕ್ಕೆ ರೈಲು ಮತ್ತೆ ಸಂಚರಿಸಲು ಆರಂಭಿಸಿತು. ಇದರಿಂದ 6 ಜನ ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಈ ವಿಚಾರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ.

ಒಡಿಶಾದ ಬಾಲಸೋರ್‌ನಲ್ಲಿ ಕಳೆದ ಶುಕ್ರವಾರ ಕೋರಮಂಡಲ್ ಎಕ್ಸ್‌ಪ್ರೆಸ್, ಗೂಡ್ಸ್ ರೈಲು ಮತ್ತು ಯಶವಂತಪುರ-ಹೌರಾ ರೈಲು ಡಿಕ್ಕಿ ಹೊಡೆದ ಪರಿಣಾಮ 288 ಜನರು ಸಾವನ್ನಪ್ಪಿದ್ದರು. ಈ ಭೀಕರ ಅಪಘಾತದಲ್ಲಿ 1 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ರೈಲು ದುರಂತದ ಐದು ದಿನಗಳ ನಂತರ ಕೋರಮಂಡಲ್ ಎಕ್ಸ್‌ಪ್ರೆಸ್ ತನ್ನ ಪ್ರಯಾಣವನ್ನು ಬುಧವಾರ ಪುನರಾರಂಭಿಸಿದೆ. ರೈಲು ಬುಧವಾರ ಮಧ್ಯಾಹ್ನ 3:30 ಕ್ಕೆ ಶಾಲಿಮಾರ್‌ನಿಂದ ಚೆನ್ನೈಗೆ ಪ್ರಯಾಣ ಬೆಳೆಸಿದೆ.