
ಮೈಸೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಎಮ್ಮೆ, ಕೋಣ ಕಡಿದು ಹಾಕುವುದಾದ್ರೆ ಹಸು ಏಕೆ ಕಡಿಯಬಾರದು ಎಂದು ಪಶುಸಂಗೋಪನಾ ಖಾತೆ ಸಚಿವ ಕೆ.ವೆಂಕಟೇಶ್ ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಮಧ್ಯಮದರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ನಮ್ಮ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ. ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ಕಷ್ಟ ಪಡಬೇಕಾಯಿತು. 25 ಜನ ಬಂದರೂ ಸತ್ತ ಹಸುವಿನ ಮೃತದೇಹ ಎತ್ತಲು ಸಾಧ್ಯವಾಗಲಿಲ್ಲ. ಕೊನೆಗೆ ಜೆಸಿಬಿ ಮೂಲಕ ಹಸುವಿನ ಮೃತದೇಹ ಹೂಳಬೇಕಾಯಿತು. ಹಾಗಾಗಿ ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚಿಸುವುದಾಗಿ ಹೇಳಿದರು. ಗೋಶಾಲೆಗಳನ್ನು ನಿರ್ವಹಣೆ ಮಾಡಲು ಹಣದ ಕೊರತೆಯಿಲ್ಲ ಎಂದು ಸಚಿವ ವೆಂಕಟೇಶ್ ತಿಳಿಸಿದರು.

ಅಮುಲ್ ವಿಚಾರವಾಗಿ ಮಾತನಾಡಿದ ಅವರು ರಾಜ್ಯಕ್ಕೆ ಅಮುಲ್ ಬಂದಿಲ್ಲ. ಅಮುಲ್ ಉತ್ಪನ್ನಗಳಿಂದ ನಂದಿನಿ ಉತ್ಪನ್ನಗಳಿಗೆ ತೊಂದರೆ ಆಗಿಲ್ಲ. ನಂದಿನಿ ಉತ್ಪನ್ನಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.