
ರಾಷ್ಟ್ರಮಟ್ಟದಲ್ಲಿ ಬಹಳ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ (17) ಎಂಬುವವಳ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿದ್ದ ಪ್ರಕರಣದ ತೀರ್ಪು 11 ವರ್ಷಗಳ ಬಳಿಕ ಬೆಂಗಳೂರು ಸಿಬಿಐ ವಿಶೇಷ ಕೋರ್ಟ್ ನಿಂದ ಜೂನ್ 16 ರಂದು ಪ್ರಕಟವಾಗಲಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಎರಡನೇ ಮಗಳು ಸೌಜನ್ಯ (17) ಕಾಲೇಜು ಮುಗಿಸಿ ಮನೆಗೆ ವಾಪಸ್ ಹೋಗುವಾಗ 9-10-2012 ರಂದು ಸಂಜೆ 4:15 ಕ್ಕೆ ನಾಪತ್ತೆಯಾಗಿದ್ದಳು.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
10-10-2012 ರಂದು ರಾತ್ರಿ 10:30 ಕ್ಕೆ ಧರ್ಮಸ್ಥಳ ಮಣ್ಣಸಂಖದಲ್ಲಿ ಸೌಜನ್ಯ ಶವ ಪತ್ತೆಯಾಗಿತ್ತು.ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರೇಪ್ & ಮರ್ಡರ್ ಪ್ರಕರಣ ದಾಖಲಾಗಿತ್ತು. 11-10-2012 ರಂದು ಪ್ರಕರಣದ ಆರೋಪಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹೌಸಿಂಗ್ ಕಾಲೋನಿಯ ಸಂತೋಷ್ ರಾವ್ (38) ಬಾಹುಬಲಿ ಬೆಟ್ಟದ ಗುಡ್ಡದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನೆ ಜೋರಾಗಿದ್ದರಿಂದ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ನೀಡಿತ್ತು. ಪ್ರಕರಣದ ಆರೋಪಿ ಸಂತೋಷ್ ರಾವ್ ಬೆಂಗಳೂರು ಸಿಬಿಐ ಕೋರ್ಟ್ ಗೆ ಆರು ಬಾರಿಗೂ ಹೆಚ್ಚು ಹಾಜರಾಗದೆ ತಲೆಮರೆಸಿಕೊಂಡಿದ್ದ. ಪ್ರಕರಣ ನಡೆದು 11 ವರ್ಷಗಳ ಬಳಿಕ ಜೂನ್ 16 ರಂದು ಈ ಪ್ರಕರಣದ ತೀರ್ಪು ಪ್ರಕಟವಾಗಲಿದೆ. ಹೀಗಾಗಿ ಈ ಪ್ರಕರಣದ ತೀರ್ಪಿನ ಸುತ್ತ ಜನರ ಕುತೂಹಲ ಹೆಚ್ಚಾಗಿದೆ.
.
