
ಬೆಂಗಳೂರು: ಹಿಂದಿನ ಸರಕಾರ ಶಾಲಾ ಪಠ್ಯ ಪುಸ್ತಕಗಳಲ್ಲಿ(School Textbook) ಸೇರಿಸಿದ ವಿಷಯಗಳನ್ನು ತೆಗೆದುಹಾಕಬೇಕೆಂದು ಬರಹಗಾರರು, ಸಾಹಿತಿಗಳು ರಾಜ್ಯ ಸರಕಾರಕ್ಕೆ ಮಾಡಿದ ಮನವಿಗೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ನಾಡಿನ ಸೌಹಾರ್ಧ ಮತ್ತು ಜಾತ್ಯತೀತ ಪರಂಪರೆಯ ರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ದ್ವೇಷ ರಾಜಕಾರಣವನ್ನು ಬಲಿ ಹಾಕಿ, ಭಯದ ವಾತಾವರಣ ಅಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಶಾಲಾ ಪಠ್ಯ ಪರಿಷ್ಕರಣೆ(School Textbook revision ) ಈ ವಿಚಾರಕ್ಕೆ ಸಂಬಂಧಿಸಿದಂತೆ ನೂತನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu Bangarappa) ಪ್ರತಿಕ್ರಿಯಿಸಿದ್ದು, ಹಂತ ಹಂತವಾಗಿ ಶಾಲಾ ಪಠ್ಯ ಪರಿಷ್ಕರಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಇಂದು(ಮೇ 30) ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪಠ್ಯ ಪರಿಷ್ಕರಣೆ ಬಗ್ಗೆ ಈಗಾಗಲೇ ಪ್ರಣಾಳಿಕೆಯಲ್ಲಿ ಹೇಳಿದ್ದು, ಹಂತ ಹಂತವಾಗಿ ಶಾಲಾ ಪಠ್ಯ ಪರಿಷ್ಕರಣೆ ಮಾಡುತ್ತೇವೆ. ಮಕ್ಕಳ ಮನಸಿಗೆ ಕಲ್ಮಶ ತುಂಬುವ ಯಾವುದೇ ಪಠ್ಯ ಇದ್ದರೂ ಅದನ್ನ ಬದಲಾವಣೆ ಮಾಡುತ್ತೇವೆ. ಪರಿಷ್ಕರಣೆ ಪ್ರಕ್ರಿಯೆ ಶುರು ಮಾಡುತ್ತೇವೆ. ಸಿಎಂ, ಡಿಸಿಎಂ ಮಾರ್ಗದರ್ಶನ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದು, ಅವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ ಎಂದರು.

ಇನ್ನು ಇದೇ ವೇಳೆ ಕಾಲೇಜುಗಳಲ್ಲಿ ಹಿಜಾಬ್ ಅನುಮತಿ ಬಗ್ಗೆ ಪ್ರತಿಕ್ರಿಯಿಸಿದ್ದು, ಹಿಜಾಬ್ ವಿಚಾರವಾಗಿ ಕೆಲವೊಂದು ಕಾನೂನು ತೊಡಕುಗಳಿವೆ. ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿ ಕ್ರಮ ಕೈಗೊಳ್ಳುತ್ತೇವೆ. ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
2023-24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭ ಹಿನ್ನೆಲೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆ (ಮೇ 31) ಶಿವಮೊಗ್ಗ ಗ್ರಾಮಾಂತರ ಶಾಲೆಗೆ ಭೇಟಿ ನೀಡುತ್ತಿದ್ದು, ಮಕ್ಕಳನ್ನ ನಾನೇ ಬರಮಾಡಿಕೊಳ್ಳುತ್ತಿದ್ದೇನೆ. ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆಯಲ್ಲಿ ಯಾವುದೇ ಗೊಂದಲವಿಲ್ಲ. ಶಿಕ್ಷಣ ಇಲಾಖೆ ಸಿದ್ದವಾಗಿದೆ. ಮಕ್ಕಳು ನಿರಾತಂಕವಾಗಿ, ಖುಷಿಯಿಂದ ಶಾಲೆಗೆ ಬನ್ನಿ ಎಂದು ಶಿಕ್ಷಣ ಸಚಿವರು ಕರೆ ನೀಡಿದರು.