
Commando Operation In Manipur: ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಹಿಂಸಾಚಾರ ಮುಂದುವರಿಯುತ್ತಿದೆ. ಮೇ 27-28ರ ಮಧ್ಯರಾತ್ರಿಯಲ್ಲಿ ಹಲವು ಪ್ರದೇಶಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ ಉಗ್ರರ ವಿರುದ್ಧ ಕಮಾಂಡೋಗಳು ಪ್ರತಿದಾಳಿ ನಡೆಸಿ 40 ಮಂದಿಯನ್ನು ಹತ್ಯೆಗೈದಿದ್ದಾರೆ.

ನವದೆಹಲಿ: ಮಣಿಪುರದಲ್ಲಿ ಎಗ್ಗಿಲ್ಲದೇ ಮುಂದುವರಿಯುತ್ತಿರುವ ಹಿಂಸಾಚಾರ ಗಳನ್ನು ನಿಗ್ರಹಿಸಲು ಅಲ್ಲಿನ ಪೊಲೀಸ್ ಪಡೆಯ ಕಮಾಂಡೋಗಳು ಉಗ್ರ ಕಾರ್ಯಾಚರಣೆ ನಡೆಸಿದ್ದಾರೆ. ಮೇ 28, ಇಂದು ಬೆಳಗ್ಗೆಯಿಂದ ಮಣಿಪುರದ ವಿವಿಧೆಡೆ ಕಮಾಂಡೋಗಳು ಸಾಕಷ್ಟು ದಂಗೆಕೋರರನ್ನು ಹತ್ಯೆಗೈಯುವಲ್ಲಿ ಸಲಫಲರಾಗಿದ್ದಾರೆ. ಅಲ್ಲಿನ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೀಡಿರುವ ಮಾಹಿತಿ ಪ್ರಕಾರ 40 ಉಗ್ರರು ಹತರಾಗಿದ್ದಾರೆ.

ಈ ಉಗ್ರರು ಎಂ-16 ಮತ್ತು ಎಕೆ-47 ರೈಫಲ್ಗಳು ಮತ್ತು ಸ್ನೈಪರ್ ಗನ್ಗಳನ್ನು ಜನಸಾಮಾನ್ಯರ ಮೇಲೆ ಉಪಯೋಗಿಸುತ್ತಿದ್ದಾರೆ. ಹಳ್ಳಿಗಳಿಗೆ ಹೋಗಿ ಮನೆಗಳನ್ನು ಸುಟ್ಟುಹಾಕುತ್ತಿದ್ದಾರೆ. ನಮ್ಮ ಸೇನೆ ಮತ್ತು ಭದ್ರತಾ ಪಡೆಗಳ ಸಹಾಯದಿಂದ ಈ ಉಗ್ರರ ಮೇಲೆ ಕಠಿಣ ಕ್ರಮ ಜರುಗಿಸುತ್ತಿದ್ದೇವೆ. 40 ಮಂದಿ ಉಗ್ರರನ್ನು ಸಂಹರಿಸಲಾಗಿರುವ ಬಗ್ಗೆ ನಮಗೆ ವರದಿಗಳು ಬಂದಿವೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಭಾನುವಾರ ಮಾಹಿತಿ ನೀಡಿದ್ದಾರೆ.


ಮಣಿಪುರದ ಇಂಫಾಲ್ ಕಣಿವೆ ಪ್ರದೇಶದ ಸುತ್ತಲಿನ ಸೆಕ್ಮಾಯ್, ಸುಗ್ನು, ಕುಂಬಿ, ಫಯೆಂಗ್ ಮತ್ತು ಸೆರೌ ಈ ಐದು ಪ್ರದೇಶಗಳ ಮೇಲೆ ಬಂಡುಕೋರರು ರಾತ್ರಿ 2ರ ವೇಳೆಯಲ್ಲಿ ಏಕಕಾಲದಲ್ಲಿ ದಾಳಿ ಆರಂಭಿಸಿದ್ದರು. ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದಾರೆ. ಈಗಲೂ ಕೂಡ ಇಲ್ಲಿ ಗುಂಡಿನ ಕಾಳಗ ಮುಂದುವರಿದಿದೆ. ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಕೆಲವರ ಶವದ ಗುರುತು ಇನ್ನೂ ಪತ್ತೆಯಾಗಿಲ್ಲ. ಬಿಶೇನ್ಪುರ್ನ ಚಂದನ್ಪೋಕಪಿ ಎಂಬಲ್ಲಿ 27 ವರ್ಷದ ರೈತರೊಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ.
‘ಉಗ್ರಗಾಮಿಗಳು ನಿಶ್ಶಸ್ತ್ರಧಾರಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಮಣಿಪುರದ ಪತನಕ್ಕೆ ಪ್ರಯತ್ನಿಸುತ್ತಿರುವ ಸಶಸ್ತ್ರಧಾರಿ ಉಗ್ರರು ಹಾಗೂ ಕೇಂದ್ರದಿಂದ ಬೆಂಬಲಿತವಾದ ರಾಜ್ಯ ಸರ್ಕಾರದ ಮಧ್ಯೆ ನಡೆಯುತ್ತಿರುವ ಯುದ್ಧ,’ ಎಂದು ಮಣಿಪುರ ಸಿಎಂ ಬಣ್ಣಿಸಿದ್ದಾರೆ.