
ಮಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಸ್ತಿತ್ವಕ್ಕೆ ಬರುತ್ತಲೇ ಬಿಜೆಪಿ (BJP) ಸರ್ಕಾರದಿಂದ ಸರ್ಕಾರಿ ಕೆಲಸ (Government Job) ಪಡೆದುಕೊಂಡಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಪತ್ನಿಗೆ ಇದೀಗ ಕೆಲಸದಿಂದ ಕೊಕ್ ನೀಡಲಾಗಿದೆ.
ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಿಜೆಪಿ ಮುಂಖಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ (Nutana Kumari) ಅವರಿಗೆ ಹಿಂದಿನ ಬಿಜೆಪಿ ಸರ್ಕಾರ ಮಾನವೀಯ ದೃಷ್ಟಿಯಿಂದ ಸರ್ಕಾರಿ ಕೆಲಸವನ್ನು ನೀಡಿತ್ತು. ಇದೀಗ ಬೊಮ್ಮಾಯಿ ಸರ್ಕಾರದ ತಾತ್ಕಾಲಿಕ ನೆಲೆಯ ನೇಮಕಾತಿಯನ್ನು ಕಾಂಗ್ರೆಸ್ ರದ್ದುಗೊಳಿಸಿದೆ.

ನೂತನ ಕುಮಾರಿ ಅವರನ್ನು 2022ರ ಸೆಪ್ಟೆಂಬರ್ 22 ರಂದು ಗುತ್ತಿಗೆ ಆಧಾರದಲ್ಲಿ ಗ್ರೂಪ್ ಸಿ ಹುದ್ದೆಗೆ ಬೊಮ್ಮಾಯಿ ಸರ್ಕಾರ ನೇಮಕ ಮಾಡಿತ್ತು. ದಕ್ಷಿಣ ಕನ್ನಡ ಜಿಲ್ಲಾಡಳಿತ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ನೂತನ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಕಾಂಗ್ರೆಸ್‌ನ ಹೊಸ ಸರ್ಕಾರ ಬಂದ ತಕ್ಷಣ ನೆಟ್ಟಾರು ಪತ್ನಿ ನೂತನ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಹಿಂದಿನ ಸರಕಾರ ಮಾಡಿರುವ ಎಲ್ಲಾ ತಾತ್ಕಾಲಿಕ ನೇಮಕಾತಿಗಳನ್ನು ರದ್ದುಗೊಳಿಸಲಾಗಿದೆ. ನೂತನ ಸರಕಾರದ ಈ ಆದೇಶವು ಅನುಕಂಪದ ಆಧಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಲ್ಲಿ ನೌಕರಿ ಪಡೆದಿದ್ದ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಯ ಕೆಲಸಕ್ಕೂ ಕುತ್ತು ತಂದಿದೆ. ಪ್ರವೀಣ್ ನೆಟ್ಟಾರ್ ಅವರು ಕಳೆದ ವರ್ಷ ಜುಲೈ 26ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದರು. ಇದೇ ವೇಳೆ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿಗೆ ಮಾನವೀಯ ನೆಲೆಯಲ್ಲಿ ಮುಖ್ಯಮಂತ್ರಿಯ ವಿಶೇಷಾಧಿಕಾರ ಬಳಸಿ ಕೆಲಸ ಕೊಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಭರವಸೆ ನೀಡಿದ್ದರು. ಅದರಂತೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವಾಲಯದಲ್ಲಿ ಹಿರಿಯ ಸಹಾಯಕಿ (ಗ್ರೂಪ್ ಸಿ) ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿ 2022ರ ಸೆಪ್ಟೆಂಬರ್ 22ರಂದು ಸರಕಾರ ಆದೇಶ ಹೊರಡಿಸಿತ್ತು. ನೂತನ ಕುಮಾರಿಯವರ ವಿನಂತಿ ಮೇರೆಗೆ ಅವರಿಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ನೌಕರಿ ಕಲ್ಪಿಸಲಾಗಿತ್ತು. ಕಳೆದ ಅಕ್ಟೋಬರ್ 14ರಿಂದ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಸರಕಾರ ಬದಲಾದಾಗ ಹಿಂದಿನ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ. ಹೀಗಾಗಿ ನೂತನ ಕುಮಾರಿಯ ನೇಮಕಾತಿ ರದ್ದುಗೊಂಡಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಟೀಕಿಸಿರುವ ರಾಜ್ಯ ಬಿಜೆಪಿ, ಈಗ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕೀಯವನ್ನು ಮುಂದುವರಿಸಿರುವುದು ಖಂಡನೀಯ. ಪ್ರವೀಣ್ ನೆಟ್ಟಾರು ಪತ್ನಿಯನ್ನು ಉದ್ಯೋಗದಿಂದ ವಜಾ ಮಾಡುವ ಅಮಾನವೀಯ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದೆ.