
ಮಂಗಳೂರು: ರಾಜ್ಯ ವಿಧಾಸನಭೆ ಚುನಾವಣೆ (Karnataka Assembly Election) ಮುಗಿದು 10 ದಿನ ಕಳೆದಿದ್ದು, ಗೆದ್ದ ನಾಯಕರು ವಿಜಯೋತ್ಸವ ಆಚರಿಸುತ್ತಿದ್ದಾರೆ. ಇದೆ ರೀತಿ ಬೆಳ್ತಂಗಡಿ (Belthangady) ಬಿಜೆಪಿ (BJP) ಶಾಸಕ ಹರೀಶ್ ಪೂಂಜಾ (Harish Poonja) ಅವರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉಜಿರೆಯ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಪಿಡಿಓ ಆದೇಶ ಹೊರಡಿಸಿದ್ದಾರೆ. ನಾಗೇಶ್ ಅಮಾನತಾದ ಉಜಿರೆ ಗ್ರಾಮ ಪಂಚಾಯತ್ ಸಿಬ್ಬಂದಿ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಚುನಾವಣಾ ಪ್ರಚಾರ ಹಾಗೂ ವಿಜಯೋತ್ಸವದಲ್ಲಿ ಪಂಚಾಯಿತಿ ಸಿಬ್ಬಂದಿ ನಾಗೇಶ್ ಬಿಜೆಪಿ ಬಾವುಟ ಹಿಡಿದು ತಿರುಗುವ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆ ಸೇವೆಯಿಂದ ಅಮಾನತು ಮಾಡಿ ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ ಆದೇಶ ಹೊರಡಿಸಿದ್ದಾರೆ

ಹರೀಶ್ ಪೂಂಜಾ ಚುನಾವಣೆ ಗೆಲ್ಲಲು ಹಣ ಹಂಚಿದ್ದಾರೆ: ಹರೀಶ್ ಕುಮಾರ್
ಈ ಕುರಿತಾಗಿ ನಗರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಹರೀಶ್ ಪೂಂಜಾ ಚುನಾವಣೆ ಗೆಲ್ಲಲು 40% ಕಮಿಷನ್ ಹಣ ಹಂಚಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಗೆಲ್ಲಲು ಹರೀಶ್ ಪೂಂಜಾ ಹಣದ ಹೊಳೆ ಹರಿಸಿದ್ದಾರೆ. ಸುಮಾರು 30ರಿಂದ 40 ಕೋಟಿ ಹಣ ಖರ್ಚು ಮಾಡಿ ಚುನಾವಣೆ ಗೆದ್ದಿದ್ದಾರೆ ಎಂದು ಆರೋಪ ಮಾಡಿದ್ದರು.

ಚುನಾವಣೆ ಸಂದರ್ಭದಲ್ಲಿ ಬೆಳ್ತಂಗಡಿ ಪೊಲೀಸರನ್ನು ಪೂಂಜಾ ಬುಕ್ ಮಾಡಿದ್ದರು. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈಗ ನಮ್ಮ ಸರ್ಕಾರ ಇರುವುದರಿಂದ ಪೂಂಜಾ ವಿರುದ್ಧ ತನಿಖೆ ನಡೆಸುತ್ತೇವೆ ಎಂದು ಕಿಡಿಕಾರಿದ್ದರು.
