
ಧಾರವಾಡ: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆ ಯಾಗಿರುವ ಅಘಾತಕಾರಿ ಘಟನೆ ಧಾರವಾಡ ನಗರದ ಕಮಲಾಪುರ ಹೊರವಲಯದಲ್ಲಿ ನಡೆದಿದೆ(Dharwad Double Murder). ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್ ಕುಡಚಿ ಸೇರಿ ಇಬ್ಬರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು ಇದರಿಂದ ಧಾರವಾಡದಲ್ಲಿ(Dharwad)ಆತಂಕದ ವಾತಾವರಣ ನಿರ್ಮಾಣವಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್ ಕುಡಚಿ ತಮ್ಮ ಮನೆ ಮುಂದೆ ಕುಳಿತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿ ಮಚ್ಚಿನಿಂದ ಹಲ್ಲೆ ನಡೆಸಿ ಕೊಚ್ಚಿ ಕೊಲೆ ಮಾಡಿದ್ದಾರೆ. ಮಹಮ್ಮದ್ ಕುಡಚಿ ಮನೆ ಮುಂದೆ ಕುಳಿತಿದ್ದಾಗ ದುಷ್ಕರ್ಮಿಗಳ ಗುಂಪು ಏಕಾಏಕಿ ದಾಳಿ ನಡೆಸಿ ಮನೆ ಎದುರೇ ಭೀಕರವಾಗಿ ಕೊಲೆ ಮಾಡಿದ್ದಾರೆ

ರಕ್ತಸಿಕ್ತ ಸ್ಥಿತಿಯಲ್ಲಿ ಮತ್ತೊಂದು ಶವ ಪತ್ತೆ
ಇನ್ನು ಕುಡಚಿ ನಿವಾಸದ ಅನತಿ ದೂರದಲ್ಲೇ ಮತ್ತೊಂದು ಶವ ಪತ್ತೆಯಾಗಿದೆ. ರಕ್ತಸಿಕ್ತ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಆತನ ಹೆಸರು ಇನ್ನೂ ತಿಳಿದುಬಂದಿಲ್ಲ. ಆತನೂ ಸಹ ಕುಡಚಿ ಮನೆಯಿಂದಲೇ ಓಡಿ ಹೋಗಿ ಬೇರೆ ಜಾಗದಲ್ಲಿ ಪ್ರಾಣ ಬಿಟ್ಟಿದ್ದಾರೆ. ದಾರಿಯುದ್ದಕ್ಕೂ ರಕ್ತ ಚೆಲ್ಲಿದೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮಣಗುಪ್ತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರವಾಡದ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಮಣಗುಪ್ತ, ಕಮಲಾಪುರ ಬಡಾವಣೆಯಲ್ಲಿ ಡಬಲ್ ಮರ್ಡರ್ ಆಗಿದೆ. ನಾನು ಸೇರಿ ಹಿರಿಯ ಅಧಿಕಾರಿಗಳು ವೈಜ್ಞಾನಿಕ ತಳಹದಿಯಲ್ಲಿ ತನಿಖೆ ಮಾಡುತ್ತಿದ್ದೇವೆ. ಎಲ್ಲ ಆಯಾಮದಲ್ಲೂ ತನಿಖೆ ಆಗುತ್ತಿದೆ. ಪ್ರಕರಣ ಸಂಬಂಧ ಮೂರು ಮಾರಕಾಸ್ತ್ರಗಳು ಸಿಕ್ಕಿವೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಲಾಗುವುದು. ಇದಕ್ಕಾಗಿ ತನಿಖಾ ತಂಡವು ರಚನೆಯಾಗಿದೆ ಎಂದು ಮಾಹಿತಿ ನೀಡಿದರು.

