
ಯಾವುದೇ ಸಂಘಟನೆ ಅಥವಾ ಸಮುದಾಯಕ್ಕೆ ಸೇರಿದವರಿರಲಿ. ಕೋಮು ದ್ವೇಷಕ್ಕೆ ಪ್ರೇರೇಪಿಸುವ ಕೆಲಸ ಮಾಡಿದರೆ ನಮ್ಮ ಸರ್ಕಾರ ಕಡಿವಾಣ ಹಾಕಲಿದೆ. ಕಾನೂನು ಕೈಗೆತ್ತಿಕೊಳ್ಳುವ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತ್ತು(Congress Manifesto). ಪ್ರಣಾಳಿಕೆಯಲ್ಲಿ ಪಿಎಫ್‌ಐ(PFI), ಭಜರಂಗದಳ(Bajrang Dal) ಸೇರಿದಂತೆ ಮತೀಯ ಸಂಘಟನೆಗಳ ನಿಷೇಧಿಸುವುದಾಗಿ ಹೇಳಿತ್ತು. ಭಜರಂಗದಳವನ್ನು ಪಿಎಫ್ಐಗೆ ಹೋಲಿಸಿದ್ದು ಹಾಗೂ ನಿಷೇಧಿಸುವುದಾಗಿ ಹೇಳಿದಕ್ಕೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಸದ್ಯ ಪ್ರಣಾಳಿಕೆಯಲ್ಲಿ ಹೇಳಿದಂತೆ ಕಾನೂನು ಕೈಗೆತ್ತಿಕೊಳ್ಳುವ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ವಿಧಾನಸೌಧದಲ್ಲಿ ನೂತನ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ತಿಳಿಸಿದ್ದಾರೆ.

ಯಾವುದೇ ಸಂಘಟನೆ ಅಥವಾ ಸಮುದಾಯಕ್ಕೆ ಸೇರಿದವರಿರಲಿ. ಕೋಮು ದ್ವೇಷಕ್ಕೆ ಪ್ರೇರೇಪಿಸುವ ಕೆಲಸ ಮಾಡಿದರೆ ನಮ್ಮ ಸರ್ಕಾರ ಕಡಿವಾಣ ಹಾಕಲಿದೆ. ಕಾನೂನು ಕೈಗೆತ್ತಿಕೊಳ್ಳುವ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ಸರ್ಕಾರ ಸ್ಪಷ್ಟವಾದ ನಿಲುವುನ್ನ ತೆಗೆದುಕೊಂಡಿದೆ. ಯಾವುದೇ ಸಂಘಟನೆ ಇರಬಹುದು ರಾಜಕೀಯ, ಸಾಮಾಜಿಕ, ನಮ್ಮ ರಾಜ್ಯದ ನೆಮ್ಮದಿಯನ್ನ ಶಾಂತಿ ಕೆಡಿಸಿದ್ರೆ ಕಟ್ಟಿ ಹಾಕ್ತೀವಿ. ಕಾನೂನು ಚೌಕಟ್ಟಿನಲ್ಲಿ, ಸಂವಿಧಾನಾತ್ಮಕವಾಗಿ ಕಟ್ಟಿ ಹಾಕ್ತೀವಿ. ಬಜರಂಗದಳ, ಪಿಎಫ್‌ಐ, ಆರ್ಎಸ್ಎಸ್ ಇರಬಹುದು ನಿಷೇಧ ಮಾಡೋದಕ್ಕೂ ನಾವು ಹಿಂದೇಟು ಹಾಕೋದಿಲ್ಲ. ಅಸಂವಿಧಾನಿಕ ಚಟುವಟಿಕೆ, ಕಾನೂನು ಬಾಹಿರ ಚಟುವಟಿಕೆ, ಕೋಮು ವಿಷ ಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಕೊಂಡ್ರೆ ಕಾನೂನು ಮೂಲಕ ಏನ್ ಕ್ರಮ ಕೈಗೊಳ್ಳಬೇಕು ತಗೋತೀವಿ ಎಂದರು.

ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಬಗ್ಗೆ ಚಿಂತಿಸುತ್ತಿದ್ದೇವೆ
ಇನ್ನು ಮತ್ತೊಂದೆಡೆ ಖಾತೆ ಹಂಚಿಕೆ ಸಂಬಂಧ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆಗೆ ಸಂಧಾನ ಸೂತ್ರ ಎಂಬುದಿಲ್ಲ. ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಬಗ್ಗೆ ಚಿಂತಿಸುತ್ತಿದ್ದೇವೆ. ಕೆಲವೊಂದು ಸಿಕ್ಕುಗಳಿವೆ, ಸಿಕ್ಕು ಗಂಟು ಬಿಡಿಸುವ ಕೆಲಸವಾಗುತ್ತಿದೆ. ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದರಿಂದ ಒಂದಷ್ಟು ಸಿಕ್ಕು. ಒಂದಷ್ಟು ದಂಡು, ಸಿಕ್ಕುಗಳಾಗುವುದು ಸಹಜ. ಎಲ್ಲವನ್ನೂ ಚಿಂತಿಸಿಯೇ ಸುಸೂತ್ರವಾಗಿ ಬಗೆಹರಿಸುವ ಕೆಲಸವಾಗುತ್ತಿದೆ ಎಂದರು.
