
ಬೆಂಗಳೂರು: ರಾಜಧಾನಿ ಬೆಂಗಳೂರಿನ (Bangalore Rain) ಹಲವೆಡೆ ಕಗ್ಗತ್ತಲ ಮೋಡ ಆವರಿಸಿದ ಕ್ಷಣಾರ್ಧದಲ್ಲೇ ಗಾಳಿ ಮಳೆ ಆರಂಭವಾಗಿದೆ. ಇನ್ನು ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಏಕಾಏಕಿಯಾಗಿ ಸುರಿದ ಧಾರಾಕಾರ ಮಳೆಗೆ (Heavy Rain) ವಾಹನ ಸವಾರರು ಪರದಾಟ ನಡೆಸಿದರು. ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಕೆರೆಯಂತಾಗಿವೆ.
ನಗರದ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ನಾಗರಬಾವಿ, ಕಾಮಾಕ್ಷಿಪಾಳ್ಯ, ಗಿರಿನಗರ, ಜಯನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ, ಶೇಷಾದ್ರಿಪುರಂ, ಮೇಖ್ರಿ ಸರ್ಕಲ್, ಜೆ.ಪಿ.ನಗರ, ನಂದಿನಿ ಲೇಔಟ್, ರಾಜಾಜಿನಗರ ಸುತ್ತಮುತ್ತ ಮಳೆಯಾಗಿದ್ದು, ಬೈಕ್ ಸವಾರರು, ರಸ್ತೆ ಬದಿ ವ್ಯಾಪಾರಿಗಳು ಪರದಾಡುವಂತಾಗಿದೆ. ಹಲವು ರಸ್ತೆಗಳಲ್ಲಿ ಮಳೆ ನೀರು ತುಂಬಿವೆ.

ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಚಂದಾಪುರದಲ್ಲೂ ಭಾರೀ ಮಳೆಯಾಗಿದೆ. ಇನ್ನು ಕೆಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗಿದ್ದು, ವಾರಾಂತ್ಯದ ಎಂಜಾಯ್ ಮೂಡ್ನಲ್ಲಿದ್ದ ನಗರದ ಜನರು ಮನೆಯೊಳಗೆ ಇರುವಂತೆ ಆಗಿದೆ.
ಬೆಂಗಳೂರು: ಆಂಧ್ರಪ್ರದೇಶದಿಂದ ಬೆಂಗಳೂರಿಗೆ (Bengaluru Rains) ಪ್ರವಾಸಕ್ಕೆ ಬಂದಿದ್ದ ಕುಟುಂಬವೊಂದರ ಮಹಿಳೆ ಭಾರೀ ಮಳೆಯಲ್ಲಿ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಇನ್ಫೋಸಿಸ್ ಉದ್ಯೋಗಿಯಾಗಿದ್ದ ಭಾನುರೇಖಾ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಇವರು ಆಂಧ್ರದ ಕೃಷ್ಣ ಜಿಲ್ಲೆಯ ತೇಲಾಪೋರಲು ಗ್ರಾಮದವರು. ಆಂಧ್ರದಿಂದ ಬೆಂಗಳೂರಿಗೆ ಪ್ರವಾಸಕ್ಕಾಗಿ ಬಂದಿದ್ದರು.
ಏನಿದು ಘಟನೆ?
ಆಂಧ್ರದಿಂದ ಬಂದು ನಗರದ ಪ್ಯಾಲೆಸ್, ಲಾಲ್ಬಾಗ್, ಕಬ್ಬನ್ ಪಾರ್ಕ್, ವಿಧಾನಸೌದ ಸೇರಿದಂತೆ ಹಲವು ಕಡೆ ಪ್ರವಾಸ ಮುಗಿಸಿ ಬಂದಿದ್ದರು. ಕುಟುಂಬದವರು ಕಾರಿನಲ್ಲಿ ತೆರಳುತ್ತಿದ್ದರು. ಭಾರೀ ಮಳೆಯಿಂದಾಗಿ ಕೆಆರ್ ಸರ್ಕಲ್ ಅಂಡರ್ಪಾಸ್ನಲ್ಲಿ ನೀರು ತುಂಬಿತ್ತು. ತಿಳಿಯದೆಯೇ ಇವರು ಅಂಡರ್ಪಾಸ್ ಮುಖಾಂತರ ಹಾದುಹೋಗಲು ಕಾರು ಚಾಲನೆ ಮಾಡಿದ್ದಾರೆ. ನೀರು ತುಂಬಿದ್ದರಿಂದ ಕಾರು ಅಲ್ಲೇ ಸಿಲುಕಿಕೊಂಡಿದೆ. ನಂತರ ಇವರು ಹೊರಬರಲು ಕಾರಿನ ಗ್ಲಾಜ್ ಇಳಿಸಿದ್ದಾರೆ. ಹೀಗೆ ಮಾಡುತ್ತಿದ್ದಂತೆ ನೀರು ಕಾರಿನೊಳಗಡೆ ನುಗ್ಗಿದೆ.
ಈ ವೇಳೆ ಭಾನುರೇಖಾ ನೀರಿನಲ್ಲಿ ಮುಳುಗಿ ಅಸ್ವಸ್ಥರಾಗಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಲಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೇ ಮಹಿಳೆ ಸಾವನ್ನಪ್ಪಿದ್ದಾರೆ.

ಮಳೆಗೆ ಕುಮಾರಕೃಪಾ ರಸ್ತೆ ಬಂದ್
ಭಾರೀ ಮಳೆ ಹಿನ್ನೆಲೆ ಕುಮಾರಕೃಪಾ ರಸ್ತೆಯನ್ನೇ ಸಂಚಾರಿ ಪೊಲೀಸರು ಬಂದ್ ಮಾಡಿದ್ದಾರೆ. ಗಾಳಿ ಮಳೆಗೆ ರಸ್ತೆ ಬದಿ ಇದ್ದ ಮರಗಳ ರೆಂಬೆ ಕೊಂಬೆಗಳು ಬಿದ್ದಿರುವ ಹಿನ್ನೆಲೆ ಬ್ಯಾರಿಗೇಡ್ ಅಳವಡಿಕೆ ಮೂಲಕ ರಸ್ತೆ ಬಂದ್ ಮಾಡಲಾಗಿದೆ. ಚಿತ್ರಕಲಾ ಪರಿಷತ್ ಮುಂಭಾಗ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರ ಬಿದ್ದು ಕಾರು, ಬೈಕ್ ಜಖಂಗೊಂಡಿದೆ. ಇನ್ನೊಂದೆಡೆ, ಕೆ.ಆರ್.ಸರ್ಕಲ್ನ ಅಂಡರ್ಪಾಸ್ನಲ್ಲಿ ಮಳೆ ನೀರು ತುಂಬಿ ಕಾರೊಂದು ಮುಳುಗಡೆಯಾಗಿದೆ. ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ.

