
ಬೆಂಗಳೂರು: ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿನ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ. ಎಲ್ಲ ಇಲಾಖೆಗಳ ಹಗರಣದ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನನ್ನ ಬಳಿ ಹೇಳಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದ್ದಾರೆ. ಪಿಎಸ್ಐ ಹಗರಣ, ನೀರಾವರಿ ಇಲಾಖೆ, ಗುತ್ತಿಗೆದಾರರ ಕೇಸ್, ಎಲ್ಲ ಕೇಸ್ಗಳ ತನಿಖೆ ಮಾಡಿಸುತ್ತೇವೆ. ಅಧಿಕಾರಿಗಳು, ಸಚಿವರೇ ಇರಲಿ ತನಿಖೆ ನಡೆಸಿ ಶಿಕ್ಷೆ ಕೊಡಿಸುತ್ತೇವೆ ಎಂದು ಖಡಕ್ ಸೂಚನೆ ನೀಡಿದರು.

ಈ ಕುರಿತು ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಮುಂದೆ ಖಾಸಗಿಯಾಗಿ ಮಾತನಾಡುತ್ತಾ ಹೇಳಿದ್ದಾರೆ, ಎಲ್ಲೆಲ್ಲಿ ಭ್ರಷ್ಟಚಾರ ಆಗಿದೆಯೋ, ಎಲ್ಲೆಲ್ಲಿ ಅಕ್ರಮಗಳು ಆಗಿದೆಯೋ, ನೀರಾವರಿ ಇರಬಹುದು, ಪಿಎಸ್ಐ ಸ್ಕ್ಯಾಮ್ ಇರಬಹುದು ಮತ್ತೊಂದು ಇರಬಹುದು ಎಲ್ಲವನ್ನು ತನಿಖೆ ಮಾಡಿಸುತ್ತೇನೆ. ಯಾರು ತಪ್ಪಿತಸ್ಥರಿದ್ದಾರೆ ಅವರು ಅಧಿಕಾರಿಗಳಾಗಿರಲಿ, ಸಚಿವರಾಗಿರಲಿ ಯಾರೇ ಇರಲಿ ಅವರನ್ನು ಶಿಕ್ಷೆಗೆ ಒಳಪಡಿಸಿ, ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು ಎಂದು ನನಗೆ ಹೇಳಿದ್ದಾರೆ ಎಂದು ತಿಳಿಸಿದರು.

ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಬೇಕು
ಕಳೆದ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿರುವುದು ಸತ್ಯ. ಎಲ್ಲ ಇಲಾಖೆಗಳ ಭ್ರಷ್ಟಾಚಾರ ಬಗ್ಗೆ ತನಿಖೆ ಆಗಬೇಕಿದೆ. ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಬೇಕು. ತನಿಖಾ ಆಯೋಗ ರಚನೆ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಇನ್ನು ಬಿಜೆಪಿ ಸರ್ಕಾರ ಅವದಿಯಲ್ಲಿನ 40% ಕಮಿಷನ್, ಪಿಎಸ್ಐ ಸ್ಕ್ಯಾಮ್ ಅನ್ನು ತನಿಖೆ ಮಾಡಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
