
ಸಚಿವ ಸಂಪುಟ ಸಭೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೇ 22ರಿಂದ ಮೂರು ದಿನ ವಿಧಾನಸಭೆ ಅಧಿವೇಶನ ನಡೆಸಲಾಗುವುದು ಎಂದರು
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ರಚನೆಯಾದ ನಂತರ ಸೋಮವಾರದಿಂದ (ಮೇ 22) ಮೊದಲ ವಿಧಾನಸಭೆ ಅಧಿವೇಶನ (Karnataka Assembly Session) ನಡೆಯಲಿದೆ. ಒಟ್ಟು ಮೂರು ದಿನಗಳ ಕಾಲ ಅಧಿವೇಶನ ನಡೆಸಲಾಗುವುದು ಎಂದು ಮುಖ್ಯಮಂತ್ರಿ (Siddaramaiah) ಅವರು ಹೇಳಿದರು. ಮೊದಲ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಂಗಾವಿ ಸ್ಪೀಕರ್ ನೇತೃತ್ವದಲ್ಲಿ ಅಧಿವೇಶನ ನಡೆಯಲಿದೆ ಎಂದರು.

ಮೇ 22ರಂದು ನಡೆಯುವ ಅಧಿವೇಶನದ ಹಂಗಾಮಿ ಸಭಾಪತಿಯಾಗಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಇರಲಿದ್ದಾರೆ. ಎಲ್ಲಾ ಶಾಸಕರ ಪ್ರಮಾಣವಚನ ಸ್ವೀಕಾರದ ನಂತರ ಸಭಾಪತಿ ಆಯ್ಕೆ ನಡೆಯಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ, ಚುನಾವಣಾ ಪ್ರಣಾಳಿಕೆಯನ್ನು ಘೋಷಣೆ ಮಾಡಿದ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ಪಡೆಯಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿದ್ದರಾಮಯ್ಯ, ನಾವು ನೀಡಿದ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಇದರಿಂದ ಹಿಂದೆ ಸರಿಯುವುದಿಲ್ಲ. ಕಟ್ಟು ನಿಟ್ಟಾಗಿ ತೆರಿಗೆಯನ್ನು ವಸೂಲಿ ಮಾಡಿ ಗ್ಯಾರಂಟಿ ಜಾರಿ ಮಾಡಲಾಗುವುದು ಎಂದರು
