
ಗುರುಪ್ರಸಾದ್ ಡಿ. ಎನ್
ನರೇಂದ್ರ ಮೋದಿಯವರು ಎರಡನೇ ಬಾರಿಗೆ ಭಾರಿ ಬಹುಮತದಲ್ಲಿ ಪ್ರಧಾನಿಯಾದ ನಂತರ ಇನ್ನು ಮಂದೆ ಬಿಜೆಪಿ ಪಕ್ಷಕ್ಕೆ ಸೋಲಿನ ಆಯ್ಕೆಯೇ ಇಲ್ಲ ಮತ್ತು ವಿರೋಧ ಪಕ್ಷಗಳ ಸಂಖ್ಯಾಬಲ ಹಾಗೂ ಜಂಘಾಬಲವೆರಡನ್ನೂ ಉಡುಗಿಸುತ್ತೇವೆಂಬ ಅಬ್ಬರದಲ್ಲಿ ತೇಲುತ್ತಿದ್ದ ಬಿಜೆಪಿಯನ್ನು ಹಲವು ರಾಜ್ಯಗಳು ಚುನಾವಣೆಗಳಲ್ಲಿ ಸೋಲಿಸಿದ್ದರೂ ಕರ್ನಾಟಕದ ಚುನಾವಣಾ ಫಲಿತಾಂಶ ಕೆಲವು ಕಾರಣಗಳಿಗೆ ಮಹತ್ವದ್ದಾಗಿದೆ. 2021ರಲ್ಲಿ ಕೇರಳದಲ್ಲಿ ಬಿಜೆಪಿ ಇದೇ ರೀತಿಯ ಅಬ್ಬರದ ಪ್ರಚಾರ ಕೈಗೊಂಡಿದ್ದರೂ ಅಲ್ಲಿ ಶೂನ್ಯ ಸಂಪಾದನೆ ಮಾಡಿತ್ತು. ಹಿಂದಿನ ಅವಧಿಯಲ್ಲಿ ಗಳಿಸಿದ್ದ ಒಂದು ಸ್ಥಾನವನ್ನೂ ಕಳೆದುಕೊಂಡಿತ್ತು. ಹಾಗೆಯೆ ಅದೇ ವರ್ಷ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚುನಾವೆಣೆಗಳಲ್ಲೂ ಬಿಜೆಪಿ ಅಬ್ಬರಿಸಿದ್ದಕ್ಕೂ ಮತ್ತು ಅದು ಗಳಿಸಿದ ಸ್ಥಾನಗಳಗೂ ಅಜಗಜಾಂತರ ವ್ಯತ್ಯಾಸವಿತ್ತು.

ಈಗ 2023 ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು 2018ಕ್ಕೆ ಹೋಲಿಸಿದರೆ ಬಿಜೆಪಿ ಪಕ್ಷ ದಯನೀಯ ಸೋಲು ಕಂಡಿದೆ. ಇಲ್ಲಿ ಉದಾಹರಿಸಿದ ರಾಜ್ಯಗಳಿಗೂ ಕರ್ನಾಟಕದ ಸೋಲಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಆ ರಾಜ್ಯಗಳಲ್ಲಿ ಬಿಜೆಪಿ ಇನ್ನೂ ನೆಲೆ ಕಂಡಿರಲಿಲ್ಲ ಅಥವಾ ಬೀಡುಬಿಟ್ಟಿರಲಿಲ್ಲ. ಅದಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ 2018ರಲ್ಲಿ ಬಿಜೆಪಿ ಪಕ್ಷ ಸುಮಾರು 36% ಮತ ಹಂಚಿಕೆ ಪ್ರಮಾಣದೊಂದಿಗೆ 104 ಸ್ಥಾನಗಳನ್ನು ಗಳಿಸಿಕೊಂಡಿತ್ತು. ನಂತರ 2019ರ ಆಪರೇಷನ್ ಕಮಲದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮತ್ತಷ್ಟು ಸಚಿವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಹುಮತವನ್ನು ಕೂಡ ಪಡೆದುಕೊಂಡು (ಆಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ) ಸರ್ಕಾರ ರಚಿಸಿತ್ತು. 2023ರಲ್ಲಿ ತನ್ನ ಹಿಂದಿನ ಮತ ಹಂಚಿಕೆ ಪ್ರಮಾಣ 36%ಅನ್ನು ಉಳಿಸಿಕೊಂಡಿದ್ದರೂ ಗೆದ್ದ ಸೀಟುಗಳ ಸಂಖ್ಯೆ 66ಕ್ಕೆ ಕುಸಿದಿದೆ. ಇದು ಮೇಲ್ನೋಟಕ್ಕೇ ನಮಗೆ ತಿಳಿಸುವುದೇನೆಂದರೆ ಬಿಜೆಪಿಯ ವಿರುದ್ಧ ಮತ್ತು ಬಿಜೆಪಿ ಪ್ರತಿನಿಧಿಸುವ ಹಿಂದುತ್ವದ ವಿರುದ್ಧದ ವೋಟುಗಳು ಧ್ರುವೀಕರಣಗೊಂಡಿವೆ ಎಂದು. ಈ ಮತಗಳನ್ನು ತನ್ನೆಡೆಗೆ ಕ್ರೋಢೀಕರಿಸಿಕೊಳ್ಳುವುದರಲ್ಲಿ ಕಾಂಗ್ರೆಸ್ ಸಫಲವಾದಂತೆ ಕಾಣುತ್ತದೆ. ಹಿಂದೆ 2018ರಲ್ಲಿ ಗಳಿಸಿದ್ದ 38% ವೋಟ್ ಶೇರ್‌ನಿಂದ ಕಾಂಗ್ರೆಸ್ ಈ ಚುನಾವಣೆಯಲ್ಲಿ 42.9% ಮತ ಹಂಚಕೆ ಪ್ರಮಾಣವನ್ನು ಪಡೆದದೆ. ಇದು ಕಾಂಗ್ರೆಸ್ ಗೆದ್ದ ಸ್ಥಾನಗಳನ್ನು 78ರಿಂದ 135ಕ್ಕೆ ಏರಿಸಿದೆ!

ಭಜರಂಗ ದಳ ನಿಷೇಧ ಕೂಡ ಈ ರಿವರ್ಸ್ ಪೋಲರೈಸೇಷನ್‌ಗೆ ಸಹಕರಿಸಿತೇ?
ಇಂತಹ ಪ್ರಶ್ನೆಯೊಂದಕ್ಕೆ ಉತ್ತರ ಪಡೆಯಲು ಮತ ಹಂಚಿಕೆಯ ಇನ್ನೂ ಆಳವಾದ ವಿಶ್ಲೇಷಣೆ ಅಗತ್ಯವಿದ್ದರೂ ಮತದಾನಕ್ಕೂ ಮುಂಚಿತವಾಗಿ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷೇಧದ ಪ್ರಸ್ತಾಪದ ಕಾರಣಕ್ಕೆ ಬಂದಂತಹ ಪ್ರತಿಕ್ರಿಯೆಗಳನ್ನು ನೆನಪಿಸಿಕೊಳ್ಳಿ. ಆ ಸಮಯಕ್ಕಾಗಲೇ ಹಲವು ಒಪಿನಿಯನ್ ಸರ್ವೇಗಳ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ 115-135 ಸ್ಥಾನಗಳು ಬರಲಿವೆ ಎಂಬ ಅಂದಾಜಿತ್ತು. ಪ್ರಣಾಳಿಕೆ ಬಿಡುಗಡೆಯ ನಂತರ ಭಜರಂಗ ದಳದ ಸದಸ್ಯರು ಶುರು ಮಾಡಿದ ಅಭಿಯಾನದಿಂದ ಹಾಗೂ ಮೋದಿ ತಮ್ಮ ಪ್ರತಿ ಭಾಷಣದಲ್ಲಿಯೂ ಭಜರಂಗ ಬಲಿಯನ್ನು ಇನ್ವೋಕ್ ಮಾಡಲು ಆರಂಭಿಸಿದ್ದರಿಂದ ಕಾಂಗ್ರೆಸ್‌ಗೆ ಸುಮಾರು 10-15 ಸ್ಥಾನಗಳು ಕುತ್ತಾಗಲಿವೆ ಎಂಬ ವಿಶ್ಲೇಷಣೆ ಎಲ್ಲೆಡೆ ಕೇಳಿಬಂದಿತ್ತು. ಆದರೆ ಈ ಎಪಿಸೋಡ್ ಬಿಜೆಪಿಗೆ ಸಹಾಯ ಮಾಡಿತು ಅನ್ನುವುದನ್ನು ಫಲಿತಾಂಶಗಳು ಸುಳ್ಳು ಮಾಡಿದವು. ಈ ಊಹೆಗೆ ವಿರುದ್ಧವಾಗಿ ಕಾಂಗ್ರೆಸ್‌ಗೆ ಸ್ಪಷ್ಟ ಮ್ಯಾಂಡೇಟ್ ಕೊಡಬೇಕು ಅನ್ನುವ ಕಾರಣಕ್ಕೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ನಿರ್ಣಾಯಕವಾಗಿ ಮತ ನೀಡಿರುವುದನ್ನು ಕಾಣಬಹುದಾಗಿದೆ.

ಮಧ್ಯ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ, ಬಾಬಾಬುಡನ್‌ಗಿರಿಯನ್ನು ಕೋಮುವಾದೀಕರಣಕ್ಕೆ ಯೋಜನೆಗೆ ಒಳಪಡಿಸಿ ಹಿಂದುತ್ವ ರಾಜಕೀಯದಲ್ಲಿ ಬೆಳೆದ ಸಿ.ಟಿ ರವಿ ಸೋಲಿಗೆ ಶರಣಾಗಿದ್ದಾರೆ. ಭಜರಂಗ ದಳ ಎಪಿಸೋಡ್ ಆದರೂ ಇವರನ್ನು ಕಾಪಾಡಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. 2018ರಲ್ಲಿ ಐದರಲ್ಲಿ ನಾಲ್ಕನ್ನು ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸೋಲನುಭವಿಸಿದೆ. ದಾವಣಗೆರೆಯಲ್ಲಿಯೂ ಕಳೆದ ಬಾರಿ ಗೆದ್ದಿದ್ದ 5 ಸ್ಥಾನಗಳಲ್ಲಿ ಒಂದನ್ನು ಮಾತ್ರ ಬಿಜೆಪಿಗೆ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಹೊನ್ನಾಳಿಯಲ್ಲಿ ಬಿಜೆಪಿಯ ಮಾಜಿ ಸಚಿವ ರೇಣುಕಾಚಾರ್ಯ ಸೋತಿದ್ದಾರೆ. ಮಾಜಿ ಮುಖ್ಯಮಮಂತ್ರಿ ಯಡಿಯೂರಪ್ಪನವರ ಜಿಲ್ಲೆಯಾದ ಶಿವಮೊಗ್ಗದಲ್ಲಿ ತನ್ನ ಸ್ಕೋರ್‌ಅನ್ನು 6ರಿಂದ ಮೂರಕ್ಕೆ ಇಳಿಸಿಕೊಂಡಿದೆ ಬಿಜೆಪಿ. ಯಡಿಯೂರಪ್ಪನವರು ಪ್ರತಿನಿಧಿಸುತ್ತಿದ್ದ ಶಿಕಾರಿಪುರದಲ್ಲಿ ಅವರ ಪುತ್ರ ವಿಜಯೇಂದ್ರ ಬಿಜೆಪಿಯಿಂದ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ನಾಗರಾಜಗೌಡ ಎದುರು ಕೇವಲ 10664 ಮತಗಳ ಅಂತರದಿಂದ ಪ್ರಯಾಸಕರ ಗೆಲುವು ಸಾಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಾಜಿ ಸಚಿವ ಕಾಂಗ್ರೆಸ್‌ನ ಆಂಜನೇಯ ಪ್ರತಿನಿಧಿಸುವ ಮೀಸಲು ಕ್ಷೇತ್ರ ಹೊಳಲ್ಕೆರೆ ಒಂದನ್ನು ಬಿಟ್ಟು ಇನ್ನೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ನೆಲಕಚ್ಚಿದೆ. ಹೀಗೆ ಮಧ್ಯ ಕರ್ನಾಟಕದಲ್ಲಿ 2018ರಲ್ಲಿ ಗೆದ್ದಿದ್ದ 21 ಸೀಟುಗಳಿಂದ ಬಿಜೆಪಿ 5ಕ್ಕೆ ಕುಸಿದಿದೆ. ಹಿಂದುತ್ವ ಮತ್ತು ಲಿಂಗಾಯತ ಮತಗಳು ಹೆಚ್ಚಿರುವ ಈ ಪ್ರದೇಶದಲ್ಲಿ ಬಿಜೆಪಿಗೆ ವಿರುದ್ಧವಾಗಿ ಮತದಾರರು ನಿರ್ಣಾಯಕವಾಗಿ ಮತ ಚಲಾಯಿಸಿರುವುದನು ಸ್ಪಷ್ಟವಾಗಿ ಗಮನಿಸಬಹುದಾಗಿದೆ.

ರಾಷ್ಟ್ರ ರಾಜಕಾರಣಕ್ಕೂ ಹೊಸ ಹುರುಪು
ಕರ್ನಾಟಕ ಚುನಾವಣೆಗಳ ಫಲಿತಾಂಶದ ಬೆನ್ನಲ್ಲೇ ಲೋಕಸಭಾ ಚುನಾವಣೆಯಲ್ಲಿ ಸೆಣೆಸಲು ವಿರೋಧ ಪಕ್ಷಗಳಿಗೆ ಹೊಸ ಹುರುಪೊಂದು ಮೂಡಿರುವುದನ್ನು ಅಲ್ಲಗಳಯುವಂತಿಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಾಂಗ್ರೆಸ್ ಬಲವಾಗಿರುವ ಕಡೆಗೆ ಟಿಎಂಸಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಅದೇ ಬೆಂಬಲವನ್ನು ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ನೀಡಬೇಕೆಂಬ ಕಿವಿಮಾತನ್ನೂ ಸೇರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಂಪ್ರದಾಯಕ ವಿರೋಧಿಯಾದ ಮಮತಾ ಅವರಿಂದ ಈ ತರಹದ ಮಾತೊಂದು ಹೊರಬಿದ್ದಿರುವುದು ಕರ್ನಾಟಕ ಫಲಿತಾಂಶ ವಿರೋಧ ಪಕ್ಷಗಳಲ್ಲಿ ಮೂಡಿಸಿರುವ ಭರವಸೆ-ಉತ್ಸಾಹವನ್ನು ಸೂಚಿಸುತ್ತದೆ. ಇದು ಮುಂದೆ ಯಾವಯಾವ ತಿರುವುಗಳನ್ನು ಪಡೆದುಕೊಳ್ಳುತ್ತದೋ ಕಾದುನೋಡಬೇಕಿದೆ.