
ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಎರಡನೇ ಬಾರಿ ಸಿಎಂ ಆಗುತ್ತಿದ್ದಾರೆ. ಮೇ 20ರಂದು ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದು ಪೂರ್ಣಾವಧಿ ಆಡಳಿತ ನಡೆಸಲಿದ್ದಾರೆ. ಟಗರು, ಹುಲಿಯಾ ಎಂದೇ ಇತ್ತೀಚೆಗೆ ಫೇಮಸ್ ಆದ ಸಿದ್ದರಾಮಯ್ಯ ಎಂದರೆ ಒಂದು ಶಕ್ತಿ, ಒಂದು ಬ್ರ್ಯಾಂಡ್. ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಕಂಡ ಅತ್ಯಂತ ಖಡಕ್ ನೇತಾರರಲ್ಲಿ ಒಬ್ಬರು ಸಿದ್ದರಾಮಯ್ಯ. ಕಡ್ಡಿ ತುಂಡು ಮಾಡಿದಂತೆ ಮಾತನಾಡುವ ಪ್ರಖರ ವಾಗ್ಮಿ. ಸಿದ್ದರಾಮಯ್ಯ (Siddaramaiah) ಉಪಸ್ಥಿತಿಯಲ್ಲಿ ನಡೆದ ವಿಧಾನಸಭೆ ಅಧಿವೇಶನಗಳನ್ನು ನೋಡಿದವರಿಗೆ ಯಾರಿಗಾದರೂ ಪರಿಚಯವಾಗಿರುತ್ತದೆ ಅವರ ವ್ಯಕ್ತಿತ್ವ. ವಿಧಾನಸಭೆಯಲ್ಲಿ ಅವರು ಎದ್ದು ಮಾತನಾಡುತ್ತಾರೆಂದರೆ ಎಲ್ಲರೂ ಶಾಲೆಯಲ್ಲಿ ಮೇಷ್ಟ್ರು ಪಾಠ ಕೇಳುವ ಮಕ್ಕಳಾಗುತ್ತಾರೆ. ಅಧಿವೇಶನಗಳಲ್ಲಿ ಸಿದ್ದರಾಮಯ್ಯರೊಂದಿಗೆ ಚರ್ಚೆಗಿಳಿಯಲು ಎದುರಾಳಿ ಪಕ್ಷಗಳ ನಾಯಕರು ಭಯಪಡುತ್ತಾರೆ ಎನ್ನುವಂತಹ ಸ್ಥಿತಿ.

ವಕೀಲರಾಗಿದ್ದ ಸಿದ್ದರಾಮಯ್ಯ ರಾಜಕೀಯಕ್ಕೆ ಪ್ರವೇಶಿಸಿ ಎರಡು ಬಾರಿ ಮುಖ್ಯಮಂತ್ರಿ ಪದವಿಗೆ ಏರಿದ ಕಥೆಗಿಂತಲೂ ಅವರೊಂದು ಜನಪ್ರಿಯ ಬ್ರ್ಯಾಂಡ್ ಆಗಿ ಬೆಳೆದ ಕಥೆ ಬಲುಕುತೂಹಲಕಾರಿ. ಕುರಿ ಎಣಿಸುವ ಕುರುಬ ಹಣಕಾಸು ಖಾತೆ ಇಟ್ಟುಕೊಂಡು ಏನ್ ಮಾಡ್ತಾನೆ ಎಂದು ಹಂಗಿಸಿದವರ ಮುಂದೆ ದಾಖಲೆಯ 8 ಬಾರಿ ಬಜೆಟ್ ಮಂಡಿಸಿ ತಾನೆಂಥವ ಎಂದು ತೋರಿಸಿದವರು ಸಿದ್ದರಾಮಯ್ಯ. ಅವರು ಸಾಗಿ ಬಂದ ದಾರಿಯನ್ನು ಒಮ್ಮೆ ಹಿಂದಿರುಗಿ ನೋಡಿದಾಗ ಹಲವು ಇಂಟ್ರೆಸ್ಟಿಂಗ್ ಸಂಗತಿಗಳು ಕಾಣುತ್ತವೆ.

ಸಿದ್ದರಾಮಯ್ಯ ಬಾಲ್ಯದ ಜೀವನ
ಸಿದ್ದರಾಮಯ್ಯ ಹುಟ್ಟಿದ್ದು 1947 ಆಗಸ್ಟ್ 3ರಂದು. ಮೈಸೂರಿನ ಟಿ ನರಸೀಪುರ ಸಮೀಪದ ವರುಣಾ ಹೋಬಳಿಯಲ್ಲಿರುವ ಸಿದ್ದರಾಮನಹುಂಡಿ ಎಂಬ ಗ್ರಾಮದಲ್ಲಿ ಹುಟ್ಟಿದವರು ಸಿದ್ದರಾಮಯ್ಯ. ವಿದ್ಯೆ, ಓದು ಇತ್ಯಾದಿ ಬಗ್ಗೆ ಆಗ ಹೆಚ್ಚಿನ ಯಾವ ಅರಿವೂ ಇಲ್ಲದಿದ್ದ ಕುರುಬ ಸಮುದಾಯಕ್ಕೆ ಸೇರಿದವರು ಅವರು. ಅಂಥ ಸ್ಥಿತಿಯಲ್ಲೂ ಅವರು ಆಗ ಬಿಎಸ್ಸಿ ಓದಿ ಎಲ್ಎಲ್ಬಿಯನ್ನೂ ಮಾಡಿ ವಕೀಲವೃತ್ತಿಯೂ ಆರಂಭಿಸಿದ್ದರು

ರೈತ ಮುಖಂಡ ನಂಜುಂಡಸ್ವಾಮಿ ಸ್ಫೂರ್ತಿ, ಲೋಕದಳ ಆರಂಭಿಕ ಹೆಜ್ಜೆ
ವಕೀಲರಾಗಿ ಕೆಲಸ ಮಾಡುತ್ತಿದ್ದ ಸಿದ್ದರಾಮಯ್ಯರನ್ನು ರಾಜಕೀಯಕ್ಕೆ ಸೆಳೆದವರು ರೈತ ಮುಖಂಡ ಪ್ರೊಫೆಸರ್ ನಂಜುಂಡಸ್ವಾಮಿ. ಎಪ್ಪತ್ತರ ದಶಕದಲ್ಲಿ ಇಂದಿರಾ ಗಾಂಧಿ ವಿರುದ್ಧ ಸಮಾಜವಾದಿ ವಿಚಾರಧಾರೆಯ ವಿವಿಧ ಪಕ್ಷಗಳು ಸೇರಿ ಭಾರತೀಯ ಲೋಕದಳ ಪಕ್ಷ ಸ್ಥಾಪಿಸಲಾಗಿತ್ತು. 1983ರಲ್ಲಿ ಸಿದ್ದರಾಮಯ್ಯ ಬಿಎಲ್ಡಿ ಟಿಕೆಟ್ನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಿಸಿದ್ದರು. ಈ ಗೆಲುವು ಸಿದ್ದರಾಮಯ್ಯರ ಕೀರ್ತಿಯನ್ನು ಏಕ್ಧಮ್ ಹೆಚ್ಚಿಸಿತ್ತು.
ಬಳಿಕ ಅವರು ಆಗ ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷ ಸೇರಿದರು. ಅಲ್ಲಿ ಕನ್ನಡ ಕಾವಲು ಸಮಿತಿಗೆ ಪ್ರಥಮಾಧ್ಯಕ್ಷರಾದರು. 1985ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಆಯ್ಕೆಯಾದರು. ರಾಮಕೃಷ್ಣ ಹೆಗಡೆ ಮತ್ತೆ ಸಿಎಂ ಆದರು. ಈ ಬಾರಿ ಸಿದ್ದರಾಮಯ್ಯಗೆ ಸಚಿವ ಸ್ಥಾನಗಳು ಸಿಕ್ಕವು. ರೇಷ್ಮೆ ಖಾತೆ, ಪಸುಸಂಗೋಪನೆ, ಸಾರಿಗೆ ಖಾತೆಗಳನ್ನು ನಿರ್ವಹಿಸಿದರು.

ಜನತಾ ಪಕ್ಷದಲ್ಲಿದ್ದ ವಿವಿಧ ಬಣಗಳನ್ನು ಸೇರಿಸಿ 1988ರಲ್ಲಿ ಜನತಾ ದಳ ಸ್ಥಾಪಿಸಲಾಯಿತು. ಸಿದ್ದರಾಮಯ್ಯ, ದೇವೇಗೌಡ, ರಾಮಕೃಷ್ಣಹೆಗಡೆ ಮೊದಲಾದವರು ಜನತಾ ದಳ ಸೇರಿದರು. 1992ರಲ್ಲಿ ಸಿದ್ದರಾಮಯ್ಯ ಜನತಾ ದಳದ ಪ್ರಧಾನ ಕಅರ್ಯದರ್ಶಿ ಆದರು. ಎಚ್.ಡಿ. ದೇವೇಗೌಡರು ಸಿಎಂ ಆದಾಗ ಅವರ ಸರ್ಕಾರದಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾದರು. 1996ರಲ್ಲಿ ದೇವೇಗೌಡರು ಪ್ರಧಾನಿಯಾದಾಗ ಜೆಎಚ್ ಪಟೇಲ್ ಸಿಎಂ ಆದರು. ಆಗ ಸಿದ್ದರಾಮಯ್ಯ ಡಿಸಿಎಂ ಆದರು. ಬಳಿಕ ಅವರು ಪಟೇಲ್ ಸರ್ಕಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡರು.

ಜನತಾ ದಳ ಮತ್ತೆ ವಿಭಜನೆಯಾಗಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸ್ಥಾಪನೆಯಾಯಿತು. ಸಿದ್ದರಾಮಯ್ಯ ಜೆಡಿಎಸ್ ಸೇರಿಕೊಂಡು ಪಕ್ಷದ ರಾಜ್ಯಾಧ್ಯಕ್ಷರಾದರು. 2004ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ನಡೆದು ಕಾಂಗ್ರೆಸ್ನ ಧರಂ ಸಿಂಗ್ ಸಿಎಂ ಆದರೆ, ಸಿದ್ದರಾಮಯ್ಯ ಮತ್ತೆ ಡಿಸಿಎಂ ಆದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸಿದ್ದು ಅವರಿಗೆ ಜನಬೆಂಬಲ ಹೆಚ್ಚಿಸಿತ್ತು.

ಅದೇ ವೇಳೆ 2005ರಲ್ಲಿ ಜೆಡಿಎಸ್ನಿಂದ ಹೊರಬಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. 2013ರ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸೋಲುಂಡು ಕಾಂಗ್ರೆಸ್ ಬಹುಮತ ಗಳಿಸಿದಾಗ ಸಿದ್ದರಾಮಯ್ಯ ಸಿಎಲ್ಪಿ ಮುಖಂಡರಾಗಿ ಆಯ್ಕೆಯಾಗಿ ಸಿಎಂ ಆದರು. ತಮ್ಮ ವಿವಿಧ ಭಾಗ್ಯ ಯೋಜನೆಗಳ ಮೂಲಕ ಸಿದ್ದರಾಮಯ್ಯ ಜನರಿಗೆ ಇನ್ನಷ್ಟು ಅಪ್ತರಾದರು. 5 ವರ್ಷ ಕಾಲ ಅವರು ರಾಜ್ಯದಲ್ಲಿ ಸುಭದ್ರ ಆಡಳಿತ ನೀಡಿದರು. ದೇವರಾಜ್ ಅರಸ್ ಬಳಿಕ ರಾಜ್ಯದಲ್ಲಿ ಪೂರ್ಣಾವಧಿ ಆಡಳಿತ ನಡೆಸಿದ ಏಕೈಕ ಸಿಎಂ ಸಿದ್ದರಾಮಯ್ಯ.
ಹಣಕಾಸು ಸಚಿವರಾಗಿಯೂ ಸಿದ್ದರಾಮಯ್ಯ ಬಹಳ ಪರಿಣಾಮಕಾರಿ ಎನಿಸಿದ್ದಾರೆ. 13 ಬಾರಿ ಬಜೆಟ್ ಮಂಡಿಸಿದ ರಾಜ್ಯದ ಏಕೈಕ ವ್ಯಕ್ತಿ ಅವರು.

ದೇವೇಗೌಡ ಕುಟುಂಬದೊಂದಿಗೆ ಸಿದ್ದರಾಮಯ್ಯ ಹಳಸಿದ ಸಂಬಂಧ
ದೇವೇಗೌಡರು ತಮ್ಮ ಮಗ ಕುಮಾರಸ್ವಾಮಿ ಅವರನ್ನು ಮುಂಚೂಣಿಗೆ ತರಲು ಹೋಗಿದ್ದು ಮತ್ತು ಎಚ್ಡಿಕೆ ವರ್ತನೆ ಸಿದ್ದರಾಮಯ್ಯಗೆ ಅಪಥ್ಯವಾಗಿತ್ತು. ಇದೇ ಕಾರಣಕ್ಕೆ ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡಲು ಜೆಡಿಎಸ್ ಪಕ್ಷದೊಳಗೆ ಪ್ರಯತ್ನವಾಗಿತ್ತು. ಸಿದ್ದರಾಮಯ್ಯ ಅಹಿಂದ ಸಮಾವೇಶ ಮಾಡಿ ತಮ್ಮ ಶಕ್ತಿಪ್ರದರ್ಶನ ಮಾಡಲು ಕಾರಣ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಆಗಾಗ್ಗೆ ಚರ್ಚೆಯಾಗುತ್ತಿರುತ್ತವೆ. ದೇವೇಗೌಡರು ಆಗ ಸಿದ್ದರಾಮಯ್ಯರನ್ನು ಉಚ್ಛಾಟಿಸುವುದು ಅನಿವಾರ್ಯವಾಗಿತ್ತು. ನಂತರ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು.

ಕುಮಾರಸ್ವಾಮಿ ಜೊತೆ ಸಿದ್ದರಾಮಯ್ಯ ಜಟಾಪಟಿ
2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿ 5 ವರ್ಷ ಆಡಳಿತ ನಡೆಸಿದ ವೇಳೆ ಅವರು ಮತ್ತು ಕುಮಾರಸ್ವಾಮಿ ನಡುವಿನ ಸಂಬಂಧ ತೀರಾ ಬಿರುಕು ಬಿಟ್ಟಿತ್ತು. ದೇವೇಗೌಡರು ಮತ್ತು ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಅನೇಕ ಬಾರಿ ವಾಗ್ದಾಳಿಗಳನ್ನು ನಡೆಸಿದ್ದುಂಟು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ರಚನೆಯಾಯಿತು. ಕುಮಾರಸ್ವಾಮಿ ಸಿಎಂ ಆದರು. ಆಗ ಸಿದ್ದರಾಮಯ್ಯ ಎರಡೂ ಪಕ್ಷಗಳ ಜಂಟಿ ಸಮಿತಿ ಮುಖ್ಯಸ್ಥರಾದರು. ಈ ವೇಳೆಯೂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹಾವು ಮುಂಗುಸಿಯಂತೆ ಇದ್ದರು. ಮೈತ್ರಿಪಕ್ಷಗಳಿಂದ ಶಾಸಕರು ರೆಬೆಲ್ ಆಗಿ ಸರ್ಕಾರ ಪತನಗೊಳ್ಳುವುದರ ಹಿಂದೆ ಸಿದ್ದರಾಮಯ್ಯ ಚಿತಾವಣಿ ಇದೆ ಎಂದೂ ಕುಮಾರಸ್ವಾಮಿ ಬೆಂಬಲಿಗರು ಹಲವು ಬಾರಿ ಆರೋಪ ಮಾಡಿದ್ದುಂಟು.

ಅದೇನೇ ಇದ್ದರೂ ಸಿದ್ದರಾಮಯ್ಯ ಪ್ರಬಲ ಜಾತ್ಯತೀತವಾದಿ ಮತ್ತು ಸಮಾಜವಾದಿ. ಹಿಂದೂಪರ ಹೋರಾಟಗಾರರನ್ನು ಉಗ್ರರಿಗೆ ಸಮಾನರು ಎಂಬ ದೃಷ್ಟಿಯಿಂದಲೇ ಅವರು ನೋಡುವುದು. ಈ ಕಾರಣಕ್ಕೆ ಬಿಜೆಪಿಯಿಂದ ಅತಿಹೆಚ್ಚು ದ್ವೇಷ ಕಾಣುವ ವ್ಯಕ್ತಿಯೂ ಹೌದು. ಇದೆಲ್ಲದರ ಮಧ್ಯೆ ಹಿಂದುಳಿದ ವರ್ಗದವರಿಗೆ ಸಿದ್ದರಾಮಯ್ಯ ಅಪ್ಪಟ ಹೀರೋ ಆಗಿ ಉಳಿದಿದ್ದಾರೆ