

ಮಂಗಳೂರು :ಬಿಜೆಪಿ ಮೊದಲು ತಮ್ಮದೇ ಆಡಳಿತ ಇರುವ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿ ಮಾಡಲಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ಅವರು ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರೋ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಪ್ರತಿ ಬಾರಿ ಪ್ರಣಾಳಿಕೆಯಲ್ಲಿ ಮಾತ್ರ ಯಾಕೆ ಏಕರೂಪ ನಾಗರಿಕ ಸಂಹಿತೆ ಮಾಡ್ತೀವಿ ಅಂತ ಹೇಳುತ್ತಿದೆ? ಬಿಜೆಪಿ ನಾಯಕರು ಜನರನ್ನು ಭ್ರಮೆಗೆ ತಳ್ಳುತ್ತಿದ್ದಾರೆ. ಸಿಎಎ ಕಾನೂನು ಮಾಡ್ತೇವೆ ಎಂದು ಈ ಹಿಂದೆ ನಾಟಕ ಮಾಡಿದ್ದರು. ಆದರೆ ಅವರಿಂದ ಏನನ್ನು ಮಾಡಲು ಸಾಧ್ಯವಾಗಲಿಲ್ಲ ಎಂದರು. ಕರ್ನಾಟಕದಲ್ಲಿ ಬಿಜೆಪಿಯ 40 ಪರ್ಸೆಂಟ್ ಕಮಿಷನ್ ಸರಕಾರ ಪತನಗೊಂಡು ಕಾಂಗ್ರೆಸ್ ನೇತೃತ್ವದ ಸರಕಾರ ಭಾರೀ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ನುಡಿದಂತೆ ನಡೆಯಲಿದೆ. ಚುನಾವಣಾಪೂರ್ವದಲ್ಲಿ ನೀಡಿದ್ದ ಗ್ಯಾರೆಂಟಿ ಸ್ಕೀಮ್‌ಗಳನ್ನು ಮೊದಲ ಸಚಿವ ಸಂಪುಟದಲ್ಲೇ ಜಾರಿಗೊಳಿಸಲಿದೆ ಎಂದು ಹೇಳಿದರು.


ಕರ್ನಾಟಕದಲ್ಲಿ ಕಾಂಗ್ರೆಸ್ ಘೋಷಿಸಿರುವ ಜನಪರವಾದ ಗ್ಯಾರಂಟಿ ಯೋಜನೆಗಳು ಬಿಜೆಪಿ ನಾಯಕರ ನಿದ್ದೆಗೆಡಿಸಿವೆ. ರಾಜಸ್ಥಾನದಲ್ಲಿ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಶೇ.85ರಷ್ಟು ಭರವಸೆಗಳನ್ನು ಈಡೇರಿಸಿದೆ. ಯಾವುದೇ ತೆರಿಗೆ ಹೆಚ್ಚಳ ಮಾಡದೆ ಬಜೆಟ್ ಭರವಸೆಯನ್ನು 95 ಪರ್ಸೆಂಟ್ ಈಡೇರಿಸಿದ್ದೇವೆ ಎಂದು ಹೇಳಿದರು.
ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಭ್ರಷ್ಟ ಬಿಜೆಪಿ ಸರಕಾರ ಎಲ್ಲ ರಂಗಳಲ್ಲೂ ವಿಫಲವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಗೆಹ್ಲೋಟ್, ಕೊಟ್ಟ ಭರವಸೆಗಳನ್ನು ಈಡೇರಿಸುವ ಪಕ್ಷ ಎಂದರೆ ಅದು ಕಾಂಗ್ರೆಸ್ . ಸಾಮಾಜಿಕ ಭದ್ರತೆ ಕಾಂಗ್ರೆಸ್ ಪಕ್ಷದ ಸಿದ್ಧಾಂತವಾಗಿದೆ. ರಾಜಸ್ಥಾನದಲ್ಲಿ ಐನೂರು ರೂ.ಗೆ ಸಿಲಿಂಡರ್ ನೀಡಲಾಗುತ್ತಿದೆ. 25 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಮಾಡಲಾಗಿದೆ. ಫ್ಯಾಸಿಸ್ಟ್ ಶಕ್ತಿಗಳು ಮಾತ್ರ ಕಾಂಗ್ರೆಸ್ ಸರಕಾರವನ್ನು ಟೀಕಿಸುತ್ತದೆ ಎಂದು ಹೇಳಿದರು. ಕರ್ನಾಟಕದಲ್ಲಿ ಬಜರಂಗದಳ ನಿಷೇಧ ಇದೆಯೋ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಜರಂಗಬಲಿ, ರಾಮನ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ, ದೇವರ ಹೆಸರಲ್ಲಿ ಸಂಘಟನೆ ಕಟ್ಟಿ ಸ್ವಾರ್ಥಕ್ಕೆ ಬಳಸಬಾರದು ಎಂದರು.
