

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಯಾದಗಟ್ಟ ಗ್ರಾಮದಲ್ಲಿ ರಾಜಕೀಯ ದ್ವೇಷದಿಂದ ಗುಂಪು ಘರ್ಷಣೆ (Clash) ಉಂಟಾಗಿರುವಂತಹ ಘಟನೆ ನಡೆದಿದೆ. ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಬೆಂಬಲಿಗ ಗಿರೀಶ್ ಹಾಗೂ ಬಿಜೆಪಿ ಅಭ್ಯರ್ಥಿ ಲಿಂಗಮೂರ್ತಿ ಬೆಂಬಲಿಗ ಓಂಕಾರಪ್ಪ ಮಧ್ಯೆ ಘರ್ಷಣೆ ಉಂಟಾಗಿದ್ದು, ಮನೆಗೆ ನುಗ್ಗಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆಂದು ಓಂಕಾರಪ್ಪ ಹಾಗೂ ಮತ್ತಿತರರ ವಿರುದ್ಧ ಗಿರೀಶ್ ಆರೋಪ ಮಾಡಿದ್ದಾರೆ. ಸದ್ಯ ಗಿರೀಶ್ ತಂದೆ ಮರುಳಪ್ಪಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಪರ ಪ್ರಚಾರ ಮಾಡಿದ್ದಕ್ಕೆ ಗಲಾಟೆ ಮಾಡಲಾಗಿದೆ ಎನ್ನಲಾಗಿದೆ. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸೈಲೆಂಟ್ ಸುನೀಲ್ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬೆಂಬಲಿಗರಿಂದ ಇತ್ತೀಚೆಗೆ ಗಲಾಟೆ ಮಾಡಲಾಗಿತ್ತು. ಭಾಸ್ಕರ್ ರಾವ್ಗೆ ಟಿಕೆಟ್ ನೀಡಿದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಚಾಮರಾಜಪೇಟೆ ಕ್ಷೇತ್ರಕ್ಕೆ ಅನ್ಯಾಯ ಆಗಿದೆ ಅಂತ ಗಲಾಟೆ ಮಾಡಿದ್ದರು.

