

ಮಂಗಳೂರು: ಬಿಜೆಪಿ ಡ್ಯಾಮ್ ಒಡೆದು ಹೋಗಿದೆ, ಡ್ಯಾಮ್ನಲ್ಲಿ ನೀರು ನಿಲ್ಲಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಪಟ್ಟಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಕೆರೆಯಲ್ಲ, ಡ್ಯಾಮ್ ಒಡೆದು ಹೋಗಿದೆ, ನೀರು ನಿಲ್ಲಿಸೋಕೆ ಆಗಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದರೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ. ಪ್ರಬುದ್ಧ ಮತದಾರರ ತೀರ್ಪು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 140 ಸೀಟ್ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು. 30 ವರ್ಷಗಳಿಂದ ಪಕ್ಷ ಕಟ್ಟಿದ್ದ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಬಿಟ್ಟು ಬಂದಿದ್ದಾರೆ. ಲಕ್ಷ್ಮಣ ಸವದಿ, ಪುಟ್ಟಣ್ಣ ಸೇರಿ ಅನೇಕ ನಾಯಕರು ಕಾಂಗ್ರೆಸ್ಗೆ ಬಂದಿದ್ದಾರೆ. ಡಜನ್ಗಟ್ಟಲೇ ಹಾಲಿ ಶಾಸಕರು ಕಾಂಗ್ರೆಸ್ ಬರಲು ರೆಡಿಯಾಗಿದ್ದರು. ಆದರೆ ನಮ್ಮಲ್ಲಿ ಜಾಗ ಇರಲಿಲ್ಲ ಎಂದರು.


ಬಿಜೆಪಿ ಕೊಟ್ಟ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಜನ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಪ್ರತಿಯೊಂದು ಬೂತ್ ಮುಂದೆ ಗ್ಯಾಸ್ ಸಿಲಿಂಡರ್ ಇಡಬೇಕು. ಬಂದ ಮತದಾರರೆಲ್ಲರೂ ಅದಕ್ಕೆ ಹೂವಿನ ಹಾರ ಹಾಕಿ ನಮಸ್ಕಾರ ಮಾಡಿ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.


ಬಿಜೆಪಿ ಗರ್ಭಗುಡಿಯಲ್ಲಿ ಎಂಥ ಹುಳುಕು
ದಕ್ಷಿಣ ಕನ್ನಡ ಜಿಲ್ಲೆಯವರು ಸಂಭಾವಿತರು, ಸಚ್ಚಾರಿತ್ರ್ಯವಂತರು ಅಂತಾರೆ. ಆದರೆ ಇಲ್ಲಿನ ಕೆಲವು ಶಾಸಕರು ತಮ್ಮ ಚಿತ್ರ ತೋರಿಸಬೇಡಿ ಎಂದು ತಡೆಯಾಜ್ಞೆ ತಂದಿದ್ದಾರೆ. ಇದರಿಂದ ಬಿಜೆಪಿ ಗರ್ಭಗುಡಿಯಲ್ಲಿ ಎಂಥ ಹುಳುಕು ಇದೆಯೆಂದು ತಿಳಿಯುತ್ತಿದೆ. ಬಾಂಬೆ ಬಾಯ್ಸ್ ಸಿಡಿ ವಿಚಾರದಲ್ಲಿ ಸ್ಟೇ ತಂದಿರೋದು ಗೊತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಬಿಜೆಪಿಯವರು ಕೋರ್ಟ್ ಸ್ಟೇ ತಂದಿದ್ದು ಯಾಕೆ ಎಂದು ಪ್ರಶ್ನಿಸಿದರು.
ನಳಿನ್ ವಿರುದ್ಧ ಶಿವಕುಮಾರ್ ಕಿಡಿ
ಇವರ ಹುಳುಕು ಈಗ ಹೊರಗೆ ಬರುತ್ತಿದೆ. ಜನ ಗಮನಿಸುತ್ತಾರೆ. ನಳಿನ್ ಬಗ್ಗೆ ಬೇರೇನು ಹೇಳಲ್ಲ, ಹತ್ತು ಲಕ್ಷ ಕೋಟಿ ಹೂಡಿಕೆ ಮಾಡಿದ್ದೇವೆಂದು ಹೇಳುತ್ತಾರೆ. ಕರಾವಳಿಯಲ್ಲಿ ಕನಿಷ್ಠ 5 ಸಾವಿರ ಬಂಡವಾಳ ಹೂಡಿಕೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಪ್ರತ್ಯೇಕ ಪಾಲಿಸಿ ಮಾಡುತ್ತೇವೆ. ಇಲ್ಲಿನ ಜನರು ದುಬೈ, ಮುಂಬೈಗೆ ಹೋಗುವ ಸ್ಥಿತಿ ಬರಬಾರದು. ಕೆಲವರು ಲಂಚಕ್ಕೆ ಹೋದಲ್ಲಿ, ಕೆಲವರು ಮಂಚಕ್ಕೆ ಹೋಗುವ ಸ್ಥಿತಿ ಬಿಜೆಪಿಗೆ ಬಂದಿದೆ ಎಂದು ವಾಗ್ದಾಳಿ ಮಾಡಿದರು.
