

ಇಂದು 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಹಾಗೆಯೇ ಉಡುಪಿ ಜಿಲ್ಲೆಗೆ 2 ನೇ ಸ್ಥಾನ, ಕೊಡಗಿಗೆ 3ನೇ ಸ್ಥಾನ, ಉತ್ತರ ಕನ್ನಡ 4ನೇ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ 9ನೇ ಸ್ಥಾನದಲ್ಲಿದ್ದರೆ, ಬೆಂಗಳೂರು ದಕ್ಷಿಣ ಜಿಲ್ಲೆ 10ನೇ ಸ್ಥಾನದಲ್ಲಿದೆ. ಬೆಂಗಳೂರು ಉತ್ತರ ಜಿಲ್ಲೆ 11ನೇ ಸ್ಥಾನದಲ್ಲಿದೆ.



ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. 7,02,067 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು 5,24,209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಈ ಬಾರಿ 74.67% ಫಲಿತಾಂಶ ದಾಖಲಾಗಿದೆ.
ದಕ್ಷಿಣ ಕನ್ನಡ ಮೊದಲ ಸ್ಥಾನ (95.33%) ಉಡುಪಿಗೆ ಎರಡನೇ ಸ್ಥಾನ( 95.24%) ಕೊಡಗಿಗೆ 3ನೇ ಸ್ಥಾನ (90.55%) ಸಿಕ್ಕಿದರೆ ಯಾದಗಿರಿಗೆ (78.97%) ಕೊನೆಯ ಸ್ಥಾನ ಸಿಕ್ಕಿದೆ.
ಎಂದಿನಂತೆ ಬಾಲಕೀಯರೇ ಮೇಲುಗೈ ಸಾಧಿಸಿದ್ದು 80.25% ಪಾಸ್ ಆಗಿದ್ದರೆ ಬಾಲಕರು 69.05% ಪಾಸ್ ಆಗಿದ್ದಾರೆ. ಗ್ರಾಮೀಣ ಭಾಗದ 74.79% ಮಕ್ಕಳು ತೇರ್ಗಡೆಯಾಗಿದ್ದರೆ 74.63% ನಗರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಬೆಂಗಳೂರಿನ ಎನ್ ಎಂಕೆಆರ್ ವಿ ಕಾಲೇಜಿನ ತಬಸ್ಸುಮ್ ಶೇಖ್ ಕಲಾ ವಿಭಾಗದಲ್ಲಿ 593 ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ, ಬಳ್ಳಾರಿಯ ಹಿಂದೂ ಇಂದು ಇನ್ನೋವೇಟಿವ್ ಪಿಯು ಕಾಲೇಜಿನ ಕುಷಾ ನಾಯ್ಕ್ ಜಿಎಲ್ ಅವರು 592 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಅದೇ ಕಾಲೇಜಿನ ದದ್ದಿ ಕರಿಬಸಮ್ಮ, ಬಳ್ಳಾರಿಯ ಎಸ್ ಯುಜೆಎಂ ಕಾಲೇಜಿನ ಮುತ್ತೂರು ಮಲ್ಲಮ್ಮ, ಬೆಳಗಾವಿಯ ಲಿಂಗರಾಜ ಪಿಯು ಕಾಲೇಜಿನ ಪ್ರಿಯಾಂಕ ಕುಲಕರ್ಣಿ, ವಿಜಯಪುರದ ಎಸ್ ಕೆ ಪಿಯು ಕಾಲೇಜಿನ ರಾಹುಲ್ 592 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಅನನ್ಯ ಕೆ.ಎ. ಅವರು 600 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗದ ವಿಕಾಸ್ ಕಾಲೇಜಿನ ಅನ್ವಿತಾ ಡಿಎನ್, ಬೆಂಗಳೂರಿನ ಟ್ರಾನ್ಸೆಂಡ್ ಪಿಯು ಕಾಲೇಜಿನ ಛಾಯಾ ರವಿಕುಮಾರ್ ಹಾಗೂ ವರ್ಷಾ, ಮೂಡಬಿದಿರೆ ಎಕ್ಸ ಲೆಂಟ್ ಕಾಲೇಜಿನ ಖುಷಿ, ಮಂಗಳೂರಿನ ವಿಕಾಸ್ ಪಿಯು ಕಾಲೇಜಿನ ಸ್ವಾತಿ, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಧನ್ಯಶ್ರೀ ಹಾಗೂ ಘಾನ, ಮೂಡಬಿದಿರೆ ಆಳ್ವಾಸ್ ಪಿಯು ಕಾಲೇಜಿನ ದಿಶಾ ರಾವ್, ಬೆಂಗಳೂರಿನ ಎಎಸ್ ಸಿ ಪಿಯು ಕಾಲೇಜಿನ ಇಂಚರಾ ಅವರು 596 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಕೋಲಾರ ಗಂಗೋತ್ರಿ ಪಿಯು ಕಾಲೇಜಿನ ಎಸ್.ಎಂ.ಕೌಶಿಕ್ ಹಾಗೂ ಬೆಂಗಳೂರಿನ ಆರ್ ವಿ ಕಾಲೇಜಿನ ಸುರಭಿ ಅವರು 596 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಆರ್ ವಿ ಪಿಯು ಕಾಲೇಜಿನ ಕೆ.ಜಯಷಿಕಾ, ಉಡುಪಿ ಮಹಾತ್ಮ ಗಾಂಧಿ ಪಿಯು ಕಾಲೇಜಿನ ಸತ್ವಿಕ್, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಜಿಸ್ವಿತಾ ಅವರು 595 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪರಿಶಿಷ್ಟ ಜಾತಿಯ ಶೇಕಡಾ 64.44, ಪರಿಶಿಷ್ಟ ಪಂಗಡದ 65.62, ಸಿ-ಎ ವಿಭಾಗದ 50.37, 2-ಎ ವಿಭಾಗದ 77.89, 2-ಬಿ ವಿಭಾಗದ 72.42, 3-ಎ ವಿಭಾಗದ 82.40, 3-ಬಿ ವಿಭಾಗದ 79.50ರಷ್ಟು ಹಾಗೂ ಸಾಮಾನ್ಯ ವಿಭಾಗದ 79.95ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕನ್ನಡ ವಿಭಾಗದ 1,83,221 ವಿದ್ಯಾರ್ಥಿಗಳು ತೇರ್ಗಡೆಯಾಗಿ 63.68ರಷ್ಟು ಫಲಿತಾಂಶ ಬಂದಿದ್ದರೆ, ಇಂಗ್ಲೀಷ್ ವಿಭಾಗದಲ್ಲಿ 82.30ರಷ್ಟು ಫಲಿತಾಂಶ ಬಂದಿದೆ.