

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಬುಧವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ಬಳಿಕ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಲಾಯಿತು.

ಇದೇ ವೇಳೆ ಮಾತನಾಡಿದ
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ, ತಾನು ಬಡವರಿಗಾಗುವ ಅನ್ಯಾಯದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ. ಪುತ್ತೂರಿಗೆ ಮೆಡಿಕಲ್ ಕಾಲೇಜು, ಒಳಚರಂಡಿ ವ್ಯವಸ್ಥೆ, ರಿಂಗ್ ರಸ್ತೆ, ಕೊಲ ಪಶುವೈದ್ಯಕೀಯ ಕಾಲೇಜಿನಲ್ಲಿ ಯುವಕರಿಗೆ ಕೆಲಸ ನೀಡುವ ಕಾರ್ಯ ಸೇರಿ ಪುತ್ತೂರಿನ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡುವ ಕೆಲಸವನ್ನು ಮಾಡುತ್ತೇನೆ. ಭ್ರಷ್ಟಾಚಾರದ ವಿರುದ್ಧ ತನ್ನ ನಿರಂತರ ಹೋರಾಟ ನಡೆಸಲಿದ್ದೇನೆ. ಭ್ರಷ್ಟ ಬಿಜೆಪಿಗೆ ಬುದ್ಧಿ ಕಲಿಸಲು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದರು.

ಈ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ, ಬಿಜೆಪಿ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇಲ್ಲ. ಮೋದಿ ಸರ್ಕಾರದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳ ಬಗ್ಗೆ ಎಂದೂ ಪ್ರಧಾನಿ ಮಾತನಾಡಿಲ್ಲ. ಗುಜರಾತ್ ಬಿಲ್ಕೀಸ್ ಬಾನು ಪ್ರಕರಣದ ಎಲ್ಲಾ ಆರೋಪಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಬಿಜೆಪಿಯವರು ಈ ಬಾರಿಯ ಚುನಾವಣೆ ಭಯೋತ್ಪಾದಕರು ಮತ್ತು ದೇಶಪ್ರೇಮಿಗಳ ನಡುವೆ ನಡೆಯಲಿದೆ ಎನ್ನುತ್ತಿದ್ದಾರೆ. ಗಾಂಧೀಜಿಯನ್ನು ಕೊಂದಿರುವ ಡಿಎನ್‍ಎ ಹೊಂದಿರುವ ಬಿಜೆಪಿಯವರ ದೇಶಪ್ರೇಮದ ಬಗ್ಗೆ ಜನರಿಗೆ ಗೊತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನೀಡಿರುವ ಆಶ್ವಾಸನೆಯನ್ನು ಎಲ್ಲಾ ಈಡೇರಿಸಿದ್ದಾರೆ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪಕ್ಷದ ಪ್ರಮುಖರಾದ ಎಂ.ಬಿ.ವಿಶ್ವನಾಥ ರೈ, ಡಾ. ರಾಜಾರಾಂ, ಕಾವು ಹೇಮನಾಥ ಶೆಟ್ಟಿ, ಮುಖಂಡರಾದ ಎಂ.ಎಸ್. ಮಹಮ್ಮದ್, ಅನಿತಾ ಹೇಮನಾಥ ಶೆಟ್ಟಿ, ಮಹಮ್ಮದ್ ಬಡಗನ್ನೂರು, ಎಚ್. ಮಹಮ್ಮದ್ ಆಲಿ, ಶಾರದ ಅರಸ್, ವಿಜಯ ಕುಮಾರ್ ಸೊರಕೆ, ಉಮಾನಾಥ ಶೆಟ್ಟಿ, ನೂರುದ್ದಿನ್ ಸಾಲ್ಮರ, ಕೃಪಾ ಅಮರ್ ಆಳ್ವ, ಶಾಲೆಟ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಉದ್ಯಮಿಯಾಗಿದ್ದು, 4.47ಕೋಟಿಯ ಚರಾಸ್ತಿ ಹಾಗೂ 65.72 ಕೋಟಿಯ ಸ್ಥಿರಾಸ್ತಿಯನ್ನು ಹೊಂದಿದ್ದು, 2022-23ನೇ ಸಾಲಿನಲ್ಲಿ 1.17ಕೋಟಿ ಆದಾಯವನ್ನು ತೋರಿಸಿದ್ದಾರೆ. 252 ಗ್ರಾಮ್ ಚಿನ್ನ ಹೊಂದಿದ್ದಾರೆ. 8.84 ಕೋಟಿ ವಿವಿಧ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನು ಹೊಂದಿದ್ದಾರೆ. ರೆನಾಲ್ಟ್ ಕೊಲಿಯೊಸ್, ಟೊಯೊಟೊ ಪಾರ್ಚೂನಾರ್ ಸೇರಿ 6 ವಾಹನವನ್ನು ಹೊಂದಿದ್ದಾರೆ. ವಿವಿಧ ಭಾಗದಲ್ಲಿ ಜಾಗವನ್ನು ಹೊಂದಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಪತ್ನಿಯ ಬಳಿ 1.20ಕೋಟಿ ಚರ ಆಸ್ತಿಯನ್ನು ಹೊಂದಿ, 68.47 ಲಕ್ಷ ಸಾಲವನ್ನು ಹೊಂದಿದ್ದಾರೆ. 2022-23ನೇ ಸಾಲಿನಲ್ಲಿ 6.20ಲಕ್ಷ ಆದಾಯವನ್ನು ತೋರಿಸಿದ್ದಾರೆ. 2207.386 ಗ್ರಾಮ್ ಚಿನ್ನ, 1383.229 ಗ್ರಾಮ ಬೆಳ್ಳಿ, 46.324 ವಜ್ರವನ್ನು ಹೊಂದಿದ್ದಾರೆ.

