

ಒಂದು ಕಾಲದಲ್ಲಿ ಕಾಂಗ್ರೆಸ್ (Congress) ಭದ್ರಕೋಟೆಯಾಗಿದ್ದ ಉಡುಪಿ ವಿಧಾನಸಭಾ ಕ್ಷೇತ್ರ (Udupi Assembly Constituency) ಈಗ ಭಾರತೀಯ ಜನತಾ ಪಕ್ಷದ ಗಟ್ಟಿ ಕ್ಷೇತ್ರ. ಗ್ರಾಮ ಪಂಚಾಯತ್‌ನಿಂದ ಸಂಸದರವರೆಗೆ ಬಿಜೆಪಿಯ ಭದ್ರ ಕೋಟೆಯಾಗಿ ಬದಲಾಗಿದೆ. ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಇಬ್ಬರು ಮೊಗವೀರ ಅಭ್ಯರ್ಥಿಗಳು ಮುಖಾಮುಖಿಯಾಗುತ್ತಿದ್ದಾರೆ. ಕಾಂಗ್ರೆಸ್ ಉದ್ಯಮಿಯನ್ನು ಕಣಕ್ಕಿಳಿಸಿದರೆ ಬಿಜೆಪಿ (BJP) ಹಿಂದುತ್ವದ ಅಸ್ತ್ರವನ್ನು ಪ್ರಯೋಗ ಮಾಡಿದೆ.
ಕೃಷ್ಣನೂರಿನ ರಾಜಕಾರಣ ಕೂಡಾ ಹಾಗೆಯೇ ಇಲ್ಲಿ ನಡೆದ 15 ಚುನಾವಣೆಯಲ್ಲಿ ನಾಲ್ಕು ಪಕ್ಷಗಳನ್ನು ಮತದಾರರು ಗೆಲ್ಲಿಸಿದ್ದಾರೆ. ಪ್ರಬಲ ಜಾತಿ ಬಲ ಇಲ್ಲದೆಯೂ ಗೆಲ್ಲಿಸಿರುವುದು ವಿಶೇಷ.

ಕರಾವಳಿ ಜಿಲ್ಲೆ ಉಡುಪಿಯ ಈ ಬಾರಿಯ ಚುನಾವಣೆ ಎಂದೆಂದೂ ಕಂಡರಿಯಾದ ಹೊಸತನದ ಚುನಾವಣೆಯಾಗಿದೆ. ಅಧಿಕಾರದಲ್ಲಿದ್ದ 5 ಬಿಜೆಪಿ ಶಾಸಕರ ಪೈಕಿ ಈ ಬಾರಿ 4 ಜನಕ್ಕೆ ಮತ್ತೆ ಸ್ಪರ್ಧಿಸುವ ಅವಕಾಶ ಸಿಕ್ಕಿಲ್ಲ. ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನಿವೃತ್ತಿಗು ಲಿಂಕ್ ಇದೆ. ಬಂಟ ಸಮುದಾಯದ ನಾಯಕ ಹಾಲಾಡಿ ರಾಜೀನಾಮೆ ಕೊಟ್ಟಾಗ ಇಡೀ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗಿದೆ. ಸಾಮಾಜಿಕ ನ್ಯಾಯ ಎಂದು ಬಿಂಬಿಸುವ ಜಾತಿಯ ಆಧಾರಿತ ಟಿಕೆಟ್ ಹಂಚಿಕೆಯಲ್ಲೂ ಬದಲಾವಣೆಯಾಗಿದೆ. ಉಡುಪಿ ಶಾಸಕ ರಘುಪತಿ ಭಟ್ ಮೂರು ಬಾರಿ ಸ್ಪರ್ಧೆ ಮಾಡಿದ್ದು ಮೂರು ಬಾರಿಯೂ ಗೆದ್ದಿದ್ದರು. ಈ ಬಾರಿ ಟಿಕೆಟ್ ತಪ್ಪಿದೆ. ಕಾಪು ಮೇಲೆ ಕಣ್ಣಿಟ್ಟಿದ್ದ ಮೊಗವೀರ ಮುಸ್ಲಿಂ ವಿರೋಧಿ , ಕ್ಷೇತ್ರದ ಯಶ್ ಪಾಲ್ ಸುವರ್ಣಗೂ (Yashpal Suvarna)ಉಡುಪಿ ಟಿಕೆಟ್ ಸಿಕ್ಕಿದೆ.

ಯಶ್ ಪಾಲ್ ಸುವರ್ಣ
ಹಿಂದುತ್ವದ ಹೋರಾಟದಿಂದ ಉದ್ಭವವಾದ ಮೊಗವೀರ ನಾಯಕ. ಬಿಕಾಂ ಶಿಕ್ಷಣವನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಡೆದಿದ್ದಾರೆ. ಕರಾವಳಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕರಾವಳಿಯಲ್ಲಿ ಹಿಂದುತ್ವದ ಹೋರಾಟದ ಮೂಲಕ ಬಿಜೆಪಿ ತನ್ನ ಸ್ಥಾನವನ್ನು ನಿಧಾನಕ್ಕೆ ಭದ್ರಪಡಿಸುತ್ತಾ ಹೋಗಿದೆ. ಸಂಘ ಪರಿವಾರ ಹಿಂದೂ ಯುವ ಸೇನೆ ಸಂಘಟನೆಯ ಮೂಲಕ ಯಶ್ ಪಾಲ್ ಸುವರ್ಣ ಪ್ರವರ್ಧಮಾನಕ್ಕೆ ಬಂದವರು. ಉಡುಪಿಯ ಪ್ರಬಲ ಮೊಗವೀರ ಸಮುದಾಯ ಕಾಂಗ್ರೆಸ್ ಪಕ್ಷದ ಜೊತೆ ಇದ್ದಂತ ಸಂದರ್ಭದಲ್ಲಿ ಯುವಕರನ್ನು ಬಿಜೆಪಿಗೆ ಸೆಳೆದವರಲ್ಲಿ ಮತ್ತು ಮೊಗವೀರ ನಾಯಕನಾಗಿ ಯಶ್ ಪಾಲ್ ಸುವರ್ಣ ಕಾಣಿಸಿಕೊಳ್ಳುತ್ತಿದ್ದಾರೆ.ಪ್ರಬಲ ಮುಸ್ಲಿಂ ಧರ್ಮ ವಿರೋಧಿ ಯಾಗಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದಾರೆ.
ಆದಿ ಉಡುಪಿ ಬೆತ್ತಲೆ ಪ್ರಕರಣ, ಹಿಜಬ್ (Hijab) ವಿರುದ್ಧದ ಹೋರಾಟ, ಸಾವರ್ಕರ್ ಸರ್ಕಲ್ ಹೋರಾಟ ಧರ್ಮ ದಂಗಲ್ ಮೂಲಕ ಪ್ರಕರ ಹಿಂದುತ್ವವಾದಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಋಣಾತ್ಮಕ ಅಂಶಗಳು
ರಫ್ ಆಂಡ್ ಟಫ್ ಅಭ್ಯರ್ಥಿ. ಹಿಂದುತ್ವದ ಹೋರಾಟದಲ್ಲಿರುವ ಕಾರಣ ಮುಸ್ಲಿಂ ಕ್ರೈಸ್ತ ಮತಗಳು ಬೀಳುವುದು ಅನುಮಾನ. ಬ್ರಹ್ಮಾವರ ತಾಲೂಕಿನಲ್ಲಿ ಯಶ್ ಪಾಲ್ ಪರಿಚಿತ ಹೆಸರಲ್ಲ. ಭಾಷಣ ಮೂಲಕ ಜನರನ್ನು ಸೆಳೆಯುವ ಶಕ್ತಿ ಕಡಿಮೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯ ಚಟುವಟಿಕೆ ಮಾಡಿಕೊಂಡಿದ್ದರು. ಅಚ್ಚರಿಯ ರೀತಿಯಲ್ಲಿ ಕೊನೆ ಕ್ಷಣದಲ್ಲಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.
ಪ್ರಸಾದ್ ರಾಜ್ ಕಾಂಚನ್
ಕಾಂಗ್ರೆಸ್ (Congress) ಉಡುಪಿಯಲ್ಲಿ ಈ ಬಾರಿ ಹೊಸ ಮುಖವನ್ನು ಪರಿಚಯಿಸಿದೆ. ಉದ್ಯಮಿ ಆಗಿರುವ ಪ್ರಸಾದ್ ಕಾಂಚನ್ (Prasad Raj Kanchan) ಎಂಬಿಎ ಪದವಿಯನ್ನು ಪಡೆದಿದ್ದಾರೆ. ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಕುಟುಂಬದಿಂದ ಬಂದಿರುವ ಪ್ರಸಾದ್ ಕಾಂಚನ್ ಗೆ ಸಕ್ರಿಯ ರಾಜಕಾರಣ ಇದೇ ಮೊದಲು.
ಸಂಪೂರ್ಣವಾಗಿ ಕಾಂಗ್ರೆಸ್ ಹಿಡಿತದಲ್ಲಿದ್ದ ಉಡುಪಿ ವಿಧಾನಸಭಾ ಕ್ಷೇತ್ರ 2004ನೇ ಇಸವಿಯ ನಂತರ ಬಿಜೆಪಿಯ ಪಾಲಾಗಿದೆ. ಒಂದು ಬಾರಿ ವಿಎಸ್ ಆಚಾರ್ಯ ಗೆದ್ದದ್ದು ಬಿಟ್ಟರೆ ನಿರಂತರವಾಗಿ ಕಾಂಗ್ರೆಸ್ ಉಡುಪಿಯಲ್ಲಿ ಅಧಿಕಾರ ನಡೆಸಿದೆ. ಎರಡನೇ ಮತ್ತು ಮೂರನೆಯ ತಲೆಮಾರನ್ನು ಬೆಳೆಸದೆ ಇರುವ ಕಾರಣ ಈ ಬಾರಿ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲಾಗಿತ್ತು. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಚುನಾವಣೆಯ ಸಂದರ್ಭ ವಿಪರೀತವಾಗಿ ಬೀಸಿದರೆ, ಅತ್ಯಾಶ್ಚರ್ಯ ಎಂಬಂತೆ ಉಡುಪಿಯಲ್ಲಿ ಕಾಂಗ್ರೆಸ್ ಗೆಲ್ಲಬಹುದು. ಸದ್ಯದ ಮಟ್ಟಿಗೆ ಸಂಘಟನೆ, ಪ್ರಚಾರದಲ್ಲಿ ಬಿಜೆಪಿ ಬಹಳ ಮುಂಚೂಣಿಯಲ್ಲಿದೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಎಷ್ಟೇ ಪ್ರಬಲವಾಗಿದ್ದರೂ, ಸುಮಾರು 40,000 ಮತಗಳು ಕಾಂಗ್ರೆಸ್ ಬುಟ್ಟಿಯೊಳಗೆ ಇದೆ. ಬಿಜೆಪಿ ಸರಕಾರದ ಭ್ರಷ್ಟಾಚಾರ ವಿಚಾರವೇ ಕಾಂಗ್ರೆಸ್ ನ ಪ್ರಮುಖ ಅಸ್ತ್ರವಾಗಿದ್ದು, ಶಾಸಕ ರಘುಪತಿ ಭಟ್ ಗೆ ಬಿಜೆಪಿ ಟಿಕೆಟ್ ಕೊಡದಿರುವುದು ಕೆಲ ಬಿಜೆಪಿ ಮತಗಳು ಕಾಂಗ್ರೆಸ್‌ಗೆ ಹೋಗಿ ಪ್ಲಸ್ ಆಗಬಹುದು. ಹೊಸ ಮುಖದ ಪ್ರಯೋಗವನ್ನು ಕಾಂಗ್ರೆಸ್ ಮಾಡಿರುವುದರಿಂದ ಕೆಲ ವಿದ್ಯಾವಂತ ಮತ್ತು ನಗರ ಭಾಗದ ಮತಗಳು ಪ್ರಸಾದ್ ರಾಜ್ ಕಾಂಚನ್ ಸಿಗಬಹುದು.
ಧನಾತ್ಮಕ ಅಂಶಗಳು:
ಎಂಬಿಎ ಪದವಿ ಓದಿದ ಉದ್ಯಮಿಗೆ ಟಿಕೆಟ್ ನೀಡಲಾಗಿದೆ. ಶಿಕ್ಷಣ, ಆರೋಗ್ಯ, ಉಡುಪಿಯ ಬೆಳವಣಿಗೆ ಮಾತು. ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ತಾಲೂಕಿನ ಒಡನಾಟ ಹೊಂದಿದ್ದಾರೆ. ಮೃದು ಸ್ವಭಾವದ ಅಭ್ಯರ್ಥಿಯಾಗಿರುವ ಇವರು 8 ಟಿಕೆಟ್ ಆಕಾಂಕ್ಷಿಗಳ ಪೈಕಿ ಆರು ಜನ ಪ್ರಸಾದ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

ಜಾತಿ ಲೆಕ್ಕಾಚಾರ
ಮೊಗವೀರ 50 ಸಾವಿರ, ಬಿಲ್ಲವ 45 ಸಾವಿರ, ಬಂಟ 35 ಸಾವಿರ, ಮುಸ್ಲಿಂ 20 ಸಾವಿರ, ಕ್ರೈಸ್ತ 12 ಸಾವಿರ, ಪರಿಶಿಷ್ಟ ಜಾತಿ ಮತ್ತು ಪಂಗಡ 25 ಸಾವಿರ, ಬ್ರಾಹ್ಮಣ ಮತ್ತು ಕೊಂಕಣಿ 20 ಸಾವಿರ, ಇತರ 3 ಸಾವಿರ ಮತಗಳಿವೆ.
ಯಾವ ಪಕ್ಷ ಎಷ್ಟು ಬಾರಿ ಗೆದ್ದಿದೆ?
ಕಾಂಗ್ರೆಸ್ 9, ಬಿಜೆಪಿ 4, ಪಿಎಸ್‌ಪಿ 1, ಕ್ರಾಂತಿರಂಗ 1 ಬಾರಿ ಗೆದ್ದುಕೊಂಡಿದೆ
ಶಾಸಕರ ವಿವರ:
1953 – ಟಿ.ಎ ಪೈ – ಕಾಂಗ್ರೆಸ್
1957 – ಯು.ಎಸ್ ನಾಯಕ್ – ಪಿಎಸ್ ಪಿ
1962 – ಮಲ್ಪೆ ಮಧ್ವರಾಜ್- ಕಾಂಗ್ರೆಸ್
1967 – ಎಸ್ ಕೆ ಅಮೀನ್- ಕಾಂಗ್ರೆಸ್
1972 – ಮನೋರಮಾ ಮಧ್ವರಾಜ್- ಕಾಂಗ್ರೆಸ್
1978 – ಮನೋರಮಾ ಮಧ್ವರಾಜ್- ಕಾಂಗ್ರೆಸ್
1983 – ಡಾ. ವಿಎಸ್ ಆಚಾರ್ಯ- ಬಿಜೆಪಿ
1985 – ಮನೋರಮಾ ಮಧ್ವರಾಜ್- ಕಾಂಗ್ರೆಸ್
1989- ಮನೋರಮಾ ಮಧ್ವರಾಜ್- ಕಾಂಗ್ರೆಸ್
1994 – ಯು. ಆರ್ ಸಭಾಪತಿ- ಕ್ರಾಂತಿರಂಗ
1999 – ಯು. ಆರ್ ಸಭಾಪತಿ- ಕಾಂಗ್ರೆಸ್
2004 – ರಘುಪತಿ ಭಟ್- ಬಿಜೆಪಿ
2008 – ರಘುಪತಿ ಭಟ್- ಬಿಜೆಪಿ
2013 – ಪ್ರಮೋದ್ ಮಧ್ವರಾಜ್- ಕಾಂಗ್ರೆಸ್
2018 – ರಘುಪತಿ ಭಟ್ – ಬಿಜೆಪಿ

