

ಕಾಂಗ್ರೆಸ್ ನಾಯಕರು ನಡೆಸಿದ ಸತತ ಮಾತುಕತೆ ಸಕ್ಸಸ್ ಆಗಿದೆ. 4 ದಶಕಗಳ ಬಿಜೆಪಿ ಪಯಣ ಅಂತ್ಯಗೊಳಿಸಿರುವ ಜಗದೀಶ್ ಶೆಟ್ಟರ್ ಇಂದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಈ ಮೂಲಕ ಪ್ರಮುಖ ಲಿಂಗಾಯತ ನಾಯಕ ಇದೀಗ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದಾರೆ
ಬೆಂಗಳೂರು(ಏ.17) ಬಿಜೆಪಿ ನಾಯಕರು ನಡೆಸಿದ ಸಂಧಾನ ಸಭೆ ವಿಫಲಾದ ಕಾರಣ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಪಕ್ಷ ತೊರೆದಿದ್ದರು. ಇದೀಗ ಕಾಂಗ್ರೆಸ್ ನಾಯಕರು ನಡೆಸಿದ ಮಾತುಕತೆ ಸಕ್ಸಸ್ ಆಗಿರುವ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್ ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬೆಳಗ್ಗೆ 8.15ಕ್ಕೆ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿ ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಶೆಟ್ಟರ್ ಕಾಂಗ್ರೆಸ್ ಬಾವುಟ ಹಿಡಿಯಲಿದ್ದಾರೆ.

ಕಾಂಗ್ರೆಸ್ ನಾಯಕರ ಜೊತೆಗೆ ಮಾತುಕತೆಯಲ್ಲಿ ಜಗದೀಶ್ ಶೆಟ್ಟರ್ ಒಂದು ಕ್ಷೇತ್ರದ ಟಿಕೆಟ್ ಮಾತ್ರ ಕೇಳಿದ್ದಾರೆ. ಯಾವುದೇ ಷರತ್ತುಗಳಿಲ್ಲದೆ ಪಕ್ಷ ಸೇರ್ಪಡೆಗೆ ಸಮ್ಮತಿ ಸೂಚಿಸಿದ್ದಾರೆ. ಇನ್ನು ಆಪ್ತರ ವಿಚಾರವನ್ನು ಕಾಂಗ್ರೆಸ್ ನಾಯಕರ ಜೊತೆಗಿನ ಚರ್ಚೆಯಲ್ಲಿ ಹೇಳಿಲ್ಲ. ಬಿಜೆಯಿಂದ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಬಂಡಾಯವೆದ್ದ ಶೆಟ್ಟರ್ ಮನವೊಲಿಸಲು ಬಿಜೆಪಿ ಹಲವು ಪ್ರಯತ್ನ ನಡೆಸಿತು. ಆದರೆ ಪಟ್ಟು ಬಿಡದ ಶೆಟ್ಟರ್ ಟಿಕೆಟ್ ನೀಡಲು ಒತ್ತಾಯಿಸಿದ್ದರು. ಇತ್ತ ಕೇಂದ್ರ ಬಿಜೆಪಿ ನಾಯಕರು ಟಿಕೆಟ್ ಹೊರತು ಪಡಿಸಿ ಉಳಿದೆಲ್ಲಾ ಆಫರ್ ನೀಡಿದ್ದರು. ಇವೆಲ್ಲವನ್ನು ತರಿಸ್ಕರಿಸಿದ ಶೆಟ್ಟರ್ ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗೆಡೆ ಕಾಗೇರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಶನಿವಾರ ಸಂಜೆ ಹುಬ್ಬಳ್ಳಿಗೆ ಆಗಮಿಸಿದ್ದ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್ , ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಜೋಶಿ ಜೊತೆ ಶೆಟ್ಟರ್ ಮನೆಗೆ ಆಗಮಿಸಿ, ಮನವೊಲಿಕೆ ಯತ್ನ ನಡೆಸಿದರು. ಆದರೆ, ವರಿಷ್ಠರಿಂದ ಟಿಕೆಟ್ ಭರವಸೆ ಸಿಗದ ಕಾರಣ ಆಕ್ರೋಶಗೊಂಡ ಶೆಟ್ಟರ್, ರಾಜೀನಾಮೆ ಘೋಷಿಸಿದರು. ನಿನ್ನೆ ಬೆಳಗ್ಗೆ ಶಿರಸಿಗೆ ತೆರಳಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಬಳಿಕ ಬೆಂಗಳೂರಿಗೆ ಆಗಮಿಸಿದ ಶೆಟ್ಟರ್ ಮನೆಗೆ ಕಾಂಗ್ರೆಸ್ ನಾಯಕರ ದಂಡೇ ಆಗಮಿಸಿ ಮಾತುಕತೆಯಲ್ಲಿ ತೊಡಗಿತ್ತು.
ಕೆಲವೇ ಕೆಲವು ವ್ಯಕ್ತಿಗಳಿಂದ ಪಕ್ಷ ಹಾಳು ಮಾಡುವ ಕೆಲಸ ನಡೆಯುತ್ತಿದೆ. ಕಿವಿ ಕಚ್ಚುವವರಿಂದ ಕಳೆದ ಮೂರು ತಿಂಗಳಿಂದ ನನಗೆ ತೊಂದರೆ ಆಗಿದೆ. ನನ್ನ ವಿರುದ್ಧ ಯಾರೆಲ್ಲಾ ಷಡ್ಯಂತ್ರ ಮಾಡಿದರು ಎಂಬುದನ್ನು ಹೇಳುತ್ತೇನೆ. ಷಡ್ಯಂತ್ರಕ್ಕೆ ಚುನಾವಣೆಯಲ್ಲಿ ಉತ್ತರ ಕೊಡುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಶೆಟ್ಟರ್ ಸಿಎಂ ರೇಸ್‌ಗೆ ಬರುತ್ತಾರೆ ಎನ್ನುವ ಭಯವಿದೆ. ಹೀಗಾಗಿ, ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
