

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಏಳು ಎಮಿರೇಟ್‌ಗಳಲ್ಲಿ ಒಂದಾದ ದುಬೈ ಸುಮಾರು 3.3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಅವರಲ್ಲಿ ಭಾರತೀಯರು ಸೇರಿ ಸುಮಾರು 90 ಪ್ರತಿಶತ ವಿದೇಶಿಯರೇ ಆಗಿದ್ದಾರೆ ಎನ್ನುವುದು ಗಮನಾರ್ಹ
ದುಬೈ (ಏಪ್ರಿಲ್ 16, 2023): ಯುಎಇಯ ಪ್ರಮುಖ ನಗರವಾದ ದುಬೈನ ವಸತಿ ಕಟ್ಟಡವೊಂದರಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ 16 ಜನರು ಮೃತಪಟ್ಟಿದ್ದು, 9 ಜನರು ತೀವ್ರ ಗಾಯಗೊಂಡಿದ್ದಾರೆ. ಇನ್ನು, ಮೃತಪಟ್ಟವರಲ್ಲಿ ನಾಲ್ವರು ಭಾರತೀಯರೂ ಸೇರಿದ್ದಾರೆ ಎಂದು ಮಾಧ್ಯಮ ವರದಿಯೊಂದು ಭಾನುವಾರ ತಿಳಿಸಿದೆ.

ದುಬೈನ ಹಳೆಯ ನೆರೆಹೊರೆಯ ಅಲ್ ರಾಸ್‌ನಲ್ಲಿರುವ ಕಟ್ಟಡವೊಂದರಲ್ಲಿ ಶನಿವಾರ ಮಧ್ಯಾಹ್ನ 12.35 ಕ್ಕೆ ಬೆಂಕಿ ಕಾಣಿಸಿಕೊಂಡ ಬಗ್ಗೆ ದುಬೈ ಸಿವಿಲ್ ಡಿಫೆನ್ಸ್ ಆಪರೇಷನ್ ರೂಮ್‌ಗೆ ಮೊದಲು ಮಾಹಿತಿ ನೀಡಲಾಯ್ತು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು ಮತ್ತು ಇತರ ಪ್ರದೇಶಗಳಿಗೆ ಹರಡಲು ಪ್ರಾರಂಭಿಸಿತು ಎಂದು ಸ್ಥಳೀಯ ಪತ್ರಿಕೆಯೊಂದು ಹೇಳಿದೆ. ನಂತರ, ದುಬೈ ಸಿವಿಲ್ ಡಿಫೆನ್ಸ್ ಪ್ರಧಾನ ಕಚೇರಿಯ ತಂಡವು ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಆಗಮಿಸಿತು ಮತ್ತು ಕಟ್ಟಡದಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಿತು. ಅಲ್ಲದೆ, ಪೋರ್ಟ್ ಸಯೀದ್ ಅಗ್ನಿಶಾಮಕ ಠಾಣೆ ಮತ್ತು ಹಮ್ರಿಯಾ ಅಗ್ನಿಶಾಮಕ ಠಾಣೆಯ ತಂಡಗಳನ್ನು ಸಹ ಕರೆಸಲಾಯಿತು. ಮಧ್ಯಾಹ್ನ 2:42ಕ್ಕೆ (ಸ್ಥಳೀಯ ಕಾಲಮಾನ) ಬೆಂಕಿ ನಂದಿಸಲಾಯಿತು ಎಂದೂ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಇನ್ನು, ಸಂತ್ರಸ್ತರಲ್ಲಿ ಕೇರಳದ ದಂಪತಿ ಸೇರಿದಂತೆ ನಾಲ್ವರು ಭಾರತೀಯರನ್ನು ಗುರುತಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ದುಬೈ ಪೊಲೀಸ್ ಶವಾಗಾರದಲ್ಲಿದ್ದ ಭಾರತೀಯ ಸಮಾಜ ಸೇವಕ ನಾಸಿರ್ ವತನಪ್ಪಲ್ಲಿ ಅವರನ್ನು ಉಲ್ಲೇಖಿಸಿ ಈ ಮಾಹಿತಿ ನೀಡಿದೆ. ಇಲ್ಲಿಯವರೆಗೆ, ಕಟ್ಟಡದಲ್ಲಿ ಕೆಲಸ ಮಾಡಿದ ಕೇರಳದ ದಂಪತಿ ಮತ್ತು ತಮಿಳುನಾಡಿನ ಇಬ್ಬರು ಪುರುಷರು, 3 ಪಾಕಿಸ್ತಾನಿ ಸೋದರ ಸಂಬಂಧಿಗಳು ಮತ್ತು ನೈಜೀರಿಯಾದ ಮಹಿಳೆ ಸೇರಿದಂತೆ 4 ಭಾರತೀಯರನ್ನು ಗುರುತಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ನಾಸಿರ್ ವತನಪ್ಪಲ್ಲಿ ಹೇಳಿದ್ದಾರೆ.
ದುಬೈ ಪೊಲೀಸರು, ದುಬೈನಲ್ಲಿರುವ ಭಾರತೀಯ ದೂತಾವಾಸ, ಇತರ ರಾಜತಾಂತ್ರಿಕ ನಿಯೋಗಗಳು ಮತ್ತು ಮೃತರ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಸಮನ್ವಯ ಸಾಧಿಸುತ್ತಿರುವುದಾಗಿ ವತನಪ್ಪಲ್ಲಿ ಹೇಳಿದ್ದಾರೆ ಎಂದೂ ವರದಿ ತಿಳಿಸಿದೆ.
ಈ ಮಧ್ಯೆ, ಪ್ರಾಥಮಿಕ ತನಿಖೆಗಳು ಕಟ್ಟಡಕ್ಕೆ ಸಾಕಷ್ಟು ಸುರಕ್ಷತಾ ಅವಶ್ಯಕತೆಗಳಿಲ್ಲ ಎಂದು ತೋರಿಸಿದೆ ಎಂದು ದುಬೈ ಸಿವಿಲ್ ಡಿಫೆನ್ಸ್ ವಕ್ತಾರರು ತಿಳಿಸಿದ್ದಾರೆ. ಆದರೂ ಅಗ್ನಿ ಅವಘಡಕ್ಕೆ ಕಾರಣಗಳ ಬಗ್ಗೆ ವಿವರವಾದ ವರದಿಯನ್ನು ನೀಡಲು ಅಧಿಕಾರಿಗಳು ಸಮಗ್ರ ತನಿಖೆ ನಡೆಸುತ್ತಿದ್ದಾರೆ ಎಂದೂ ಮಾಹಿತಿ ನೀಡಲಾಗಿದೆ.
