

ನವದೆಹಲಿ: ಪ್ರಸ್ತುತ ಐಪಿಎಲ್ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್. ಮಾತ್ರವಲ್ಲ ಅನ್ಯ ಕ್ರೀಡೆಗಳಿಗೆ ಹೋಲಿಸಿದರೂ ಶ್ರೀಮಂತ ಲೀಗ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ. ಹೀಗಿರುವಾಗ ಸೌದಿ ಅರೇಬಿಯ ತನ್ನ ನಾಡಿನಲ್ಲಿ ವಿಶ್ವದ ಶ್ರೀಮಂತ ಟಿ20 ಲೀಗ್ ನಡೆಸಲು ಯೋಜನೆ ಹಾಕಿಕೊಂಡಿದೆ. ಅದಕ್ಕೆ ಭಾರತೀಯ ಐಪಿಎಲ್ ತಂಡಗಳ ಮಾಲಿಕರನ್ನೂ ಮಾತನಾಡಿಸಿದೆ. ಮೂಲಗಳ ಪ್ರಕಾರ ಬಿಸಿಸಿಐಯನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನ ಆರಂಭಿಸಿದೆ. ಇದುವರೆಗೆ ಬಿಸಿಸಿಐ ಒಪ್ಪಂದದಲ್ಲಿರುವ ಕ್ರಿಕೆಟಿಗರು, ಇನ್ನೂ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವುದೇ ರೀತಿ ಸಕ್ರಿಯವಾಗಿರುವವರು ಇತರೆ ದೇಶಗಳ ಯಾವುದೇ ಕ್ರಿಕೆಟ್ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ನಿಯಮ ಮಾಡಲಾಗಿದೆ. ಸದ್ಯದ ವರದಿಗಳ ಪ್ರಕಾರ ಬಿಸಿಸಿಐ ತನ್ನ ಈ ನಿಯಮಕ್ಕೆ ತಿದ್ದುಪಡಿ ಚಿಂತನೆ ನಡೆಸಿದೆ ಎನ್ನಲಾಗಿದೆ.


