

ಬೆಂಗಳೂರು(ಏ.14): ಜಿದ್ದಾಜಿದ್ದಿನ ಚುನಾವಣಾ ಅಖಾಡಕ್ಕೆ ಅಧಿಕೃತವಾಗಿ ಗುರುವಾರ ಅಧಿಸೂಚನೆ ಹೊರಡಿಸಲಾಗಿದ್ದು, ಮೊದಲ ದಿನವೇ ಘಟಾನುಘಟಿಗಳು ಸೇರಿದಂತೆ ಇತರೆ ಅಭ್ಯರ್ಥಿಗಳಿಂದ 221 ಉಮೇದುವಾರಿಕೆಗಳು ಸಲ್ಲಿಕೆಯಾಗಿವೆ. ಬಿಜೆಪಿಯಿಂದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಮತ್ತು ಕಾಂಗ್ರೆಸ್‌ನಿಂದ ಶಾಸಕ ಶಿವಾನಂದ ಪಾಟೀಲ್, ರೂಪಕಲಾ, ರಾಜಶೇಖರ್, ಗಂಗಾಂಬಿಕೆ ಮಲ್ಲಿಕಾರ್ಜುನ್, ಪಕ್ಷೇತರ ಆಗಿ ಕೆಜಿಎಫ್ ಬಾಬು ಪತ್ನಿ ಶಾಜಿಯಾ ತರನ್ನಮ್ ಸೇರಿದಂತೆ ಇತರೆ ಹುರಿಯಾಳುಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಿದರು. ಒಟ್ಟು 221 ನಾಮಪತ್ರಗಳು ಸಲ್ಲಿಕೆಯಾಗಿವೆ.

221 ನಾಮಪತ್ರಗಳ ಪೈಕಿ 197 ನಾಮಪತ್ರಗಳನ್ನು ಪುರುಷರು, 24 ನಾಮಪತ್ರಗಳನ್ನು ಮಹಿಳೆಯರು ಸಲ್ಲಿಸಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಪಕ್ಷಗಳಾದ ಬಿಜೆಪಿಯಿಂದ 27, ಕಾಂಗ್ರೆಸ್‌ನಿಂದ 26, ಜೆಡಿಎಸ್‌ನಿಂದ 12, ಎಎಪಿಯಿಂದ 10, ಬಿಎಸ್‌ಪಿಯಿಂದ ಎಸ್ ಡಿ ಪಿ ಐ ಯಿಂದ ಒಂದು ನಾಮಪತ್ರಗಳು ಸಲ್ಲಿಕೆಯಾಗಿವೆ. ನೋಂದಾಯಿತ ಪಕ್ಷಗಳಿಂದ ಗುರುತಿಸಿರುವ 100 ನಾಮಪತ್ರಗಳು ಸಲ್ಲಿಕೆ ಮಾಡಲಾಗಿದೆ. ಇನ್ನು, 45 ನಾಮಪತ್ರಗಳು ಪಕ್ಷೇತರರಿಂದ ಸಲ್ಲಿಕೆಯಾಗಿವೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ತಮ್ಮ ಕಾರ್ಯಕರ್ತರು, ಬೆಂಬಲಿಗರಿಂದ ಮೆರವಣಿಗೆಯಲ್ಲಿ ಸಾಗಿ ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಿದರು. ಹಲವು ಅಭ್ಯರ್ಥಿಗಳು ಎರಡೆರಡು ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.


