

ಹಾಲಿ ಸಚಿವ ಎಸ್.ಅಂಗಾರರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಹಿರಿಯ ಮುಖಂಡ ವೆಂಕಟ್ ವಳಲಂಬೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಜೊತೆಗೆ ಪುತ್ತೂರು ಬಿಜೆಪಿ ಅಭ್ಯರ್ಥಿ ಬಗ್ಗೆ ಸ್ವಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗಿದ್ದು ಭಿನ್ನಮತಕ್ಕೆ ಕಾರಣವಾಗಿದೆ.

ಕಳೆದ 30 ವರ್ಷಗಳ ಕಾಲ ಕ್ಷೇತ್ರ ಮತ್ತು ಪಕ್ಷಕ್ಕೆ ಯಾವುದೇ ಚ್ಯುತಿ ಬಾರದ ರೀತಿ ದುಡಿದ ಸಾಮಾನ್ಯ ಮನೆತನದಿಂದ ಬಂದಿರುವ ಸರಳ ಸಜ್ಜನಿಕೆಯ ಎಲ್ಲರ ಜನಮನ ಗೆದ್ದಿರುವ ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿರುವ ಎಸ್.ಅಂಗಾರರಂತಹ ಪ್ರಾಮಾಣಿಕ ನಾಯಕನ ಜೊತೆ ಚರ್ಚಿಸದೆ ಏಕಪಕ್ಷೀಯವಾಗಿ ಅಭ್ಯರ್ಥಿ ಘೋಷಣೆ ಮಾಡಿರುವುದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿರುತ್ತದೆ. ಆದುದರಿಂದ ನನ್ನ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಈ ಕ್ಷಣದಿಂದಲೇ ರಾಜೀನಾಮೆ ನೀಡಿರುತ್ತೇನೆ ಎಂದು ಜಿಲ್ಲಾ ಅಧ್ಯಕ್ಷ ಸುದರ್ಶನ ಮೂಡುಬಿದ್ರೆ ಇವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ವೆಂಕಟ್ ವಳಲಂಬೆ ತಿಳಿಸಿದ್ದಾರೆ.

