

ಬಿಜೆಪಿ ಪಾಲಿಗೆ ಭದ್ರಕೋಟೆಯಾಗಿರುವ ಕರಾವಳಿ ಕರ್ನಾಟಕದ ಟಿಕೆಟ್‌ನಲ್ಲಿ ಮೇಜರ್ ಸರ್ಜರಿ ಮಾಡಿದೆ. ಒಟ್ಟು 189 ಕ್ಷೇತ್ರಗಳಿಗೆ ಘೋಷಣೆಯಾಗಿರುವ ಟಿಕೆಟ್ ಪೈಕಿ, 10 ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿದೆ. ಇದರಲ್ಲಿ ಐದು ಹಾಲಿ ಶಾಸಕರು ಕರಾವಳಿಯವರೇ ಆಗಿದ್ದಾರೆ.
ಬೆಂಗಳೂರು (ಏ.11): ಸುದೀರ್ಘ ಸಭೆಗಳು, ಸಾಲು ಸಾಲು ಮ್ಯಾರಥಾನ್ ಮೀಟಿಂಗ್‌ಗಳ ಬಳಿಕ ಬಿಜೆಪಿ ರಾಜ್ಯ ವಿಧಾನಸಭೆ ಚುನಾವಣೆಗೆ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಈ 189 ಅಭ್ಯರ್ಥಿಗಳ ಪಟ್ಟಿಯಲ್ಲಿ 10 ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದೆ. ಅದರಲ್ಲಿ ಐದು ಶಾಸಕರು ಕರಾವಳಿ ಕರ್ನಾಟಕದವರೇ ಆಗಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ಅಭ್ಯರ್ಥಿಗಿಂತ ಹೆಚ್ಚಾಗಿ ಬಿಜೆಪಿಯ ಚಿಹ್ನೆ ನೋಡಿ ಮತ ಹಾಕುವವರೇ ಹೆಚ್ಚಿರುವ ಕಾರಣ ಬಿಜೆಪಿ ಈ ಭಾಗದಲ್ಲಿ ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಡುಪಿಯಲ್ಲಿ ಹಾಲಿ ಶಾಸಕರಾಗಿದ್ದ ರಘುಪತಿ ಭಟ್‌ಗೆ ಟಿಕೆಟ್ ಮಿಸ್ ಆಗಿದ್ದರೆ, ಸುಳ್ಯದಿಂದ ಅಂಗಾರ, ಕಾಪುದಿಂದ ಲಾಲಾಜಿ ಮೆಂಡೆನ್ ಹಾಗೂ ಪುತ್ತೂರಿನಿಂದ ಸಂಜೀವ್ ಮಠಂದೂರುಗೆ ಕೂಡ ಟಿಕೆಟ್ ತಪ್ಪಿದೆ. ಇನ್ನು ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವ ಕಾರಣ ಅವರ ಸ್ಥಾನಕ್ಕೆ ಹೊಸ ಅಭ್ಯರ್ಥಿಯನ್ನು ಬಿಜೆಪಿ ಆಯ್ಕೆ ಮಾಡಿದೆ. ಇನ್ನು ಬೈಂದೂರಿನಲ್ಲಿ ಈವರೆಗೂ ಟಿಕೆಟ್ ಘೋಷಣೆ ಮಾಡಲಾಗಿಲ್ಲ. ಹಾಲಿ ಶಾಸಕರಾಗಿರುವ ಸುಕುಮಾರ್ ಶೆಟ್ಟಿಗೆ ಇಲ್ಲಿ ಟಿಕೆಟ್ ತಪ್ಪಬಹುದು ಎನ್ನುವ ಸುದ್ದಿಗಳು ಹೆಚ್ಚಿವೆ.

ಇನ್ನು ಉಡುಪಿಯಲ್ಲಿ ಯಶ್‌ಪಾಲ್ ಸುವರ್ಣಗೆ ಅವಕಾಶ ನೀಡಲಾಗಿದೆ. ಉಡುಪಿಯಲ್ಲಿ ಈ ಬಾರಿ ಸಾಕಷ್ಟು ಸದ್ದು ಮಾಡಿದ್ದ ಹಿಜಾಬ್ ಪ್ರಕರಣದಲ್ಲಿ ಯಶ್‌ಪಾಲ್ ಸುವರ್ಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅದರೊಂದಿಗೆ ಸುಳ್ಯದಲ್ಲಿ ಭಾಗೀರಥಿ ಮರುಳ್ಯಗೆ ಟಿಕೆಟ್ ನೀಡಿದ್ದರೆ, ಕಾಪುವಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಕಾರ್ಯಕರ್ತರು ಹಾಗೂ ಸ್ಥಳೀಯ ಬಿಜೆಪಿ ನಾಯಕರಿಂದಲೇ ದೊಡ್ಡ ಮಟ್ಟದ ವಿರೋಧ ಎದುರಿಸಿದ್ದ ಸಂಜೀವ್ ಮಠಂದೂರು ಪುತ್ತೂರು ಟಿಕೆಟ್ ಕಳೆದುಕೊಂಡಿದ್ದು ಅವರ ಬದಲು ಆಶಾ ತಿಮ್ಮಪ್ಪಗೆ ಟಿಕೆಟ್ ನೀಡಲಾಗಿದೆ.
ಇನ್ನು ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ದಶಕಗಳ ಕಾಲ ಪ್ರತಿನಿಧಿಸಿದ್ದ ಕ್ಷೇತ್ರವಾದ ಕುಂದಾಪುರದಿಂದ ಕಿರಣ್ ಕುಮಾರ್ ಕೂಡಿಗಿಗೆ ಬಿಜೆಪಿ ಟಿಕೆಟ್ ನೀಡಿದೆ. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಎ.ಕಿರಣ್ ಕುಮಾರ್ ಕೊಡ್ಗಿ, ಶ್ರೀನಿವಾಸ್ ಶೆಟ್ಟಿ ಅವರ ಉತ್ತರಾಧಿಕಾರಿ ಎಂದು ಘೋಷಣೆ ಮಾಡಲಾಗಿತ್ತು.

ಇನ್ನು ಕಾರ್ಕಳದಲ್ಲಿ ಸಚಿವ ವಿ.ಸುನೀಲ್ ಕುಮಾರ್ ಅವರು ಮತ್ತೊಮ್ಮೆ ಕದನ ಕಣದಲ್ಲಿ ಹೋರಾಟ ಮಾಡಲಿದ್ದರೆ, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ, ಮೂಡಬಿದ್ರೆಯಲ್ಲಿ ಉಮಾನಾಥ್ ಕೋಟ್ಯಾನ್, ಮಂಗಳೂರು ನಗರ ಕ್ಷೇತ್ರದಿಂದ ವೈ.ಭರತ್ ಶೆಟ್ಟಿ, ಮಂಗಳೂರು ನಗರ ದಕ್ಷಿಣದಿಂದ ವೇದವ್ಯಾಸ್ ಕಾಮತ್ ಹಾಗೂ ಬಂಟ್ವಾಳ ಕ್ಷೇತ್ರದಿಂದ ರಾಜೇಶ್ ನಾಯ್ಕ್ ಮತ್ತೊಮ್ಮೆ ಸ್ಪರ್ಧೆ ಮಾಡಲು ಟಿಕೆಟ್ ಪಡೆದುಕೊಂಡಿದ್ದಾರೆ. ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಯುಟಿ ಖಾದರ್ ವಿರುದ್ಧ ಸ್ಪರ್ಧೆ ಮಾಡಲು ಸತೀಶ್ ಕುಂಪಾಲ ಅಣಿಯಾಗಿದ್ದಾರೆ.
ಆದರೆ, ಇದೇ ರಿಸ್ಕ್‌ಅನ್ನು ಉತ್ತರ ಕನ್ನಡದಲ್ಲಿ ಬಿಜೆಪಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಹೋಗಿಲ್ಲ. ಹಳಿಯಾಳದಲ್ಲಿ ಕಾಂಗ್ರೆಸ್‌ನ ಆರ್‌ವಿ ದೇಶಪಾಂಡೆ ವಿರುದ್ಧ ಸುನಿಲ್ ಹೆಗಡೆಗೆ ಟಿಕೆಟ್ ನೀಡಿದೆ. ಕಾರವಾರದಿಂದ ರೂಪಾಲಿ ನಾಯ್ಕ್, ಕುಮಟಾದಿಂದ ದಿನಕರ ಶೆಟ್ಟಿ, ಭಟ್ಕಳದಿಂದ ಸುನೀಲ್ ನಾಯ್ಕ್, ಶಿರಸಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಯಲ್ಲಾಪುರದಿಂದ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಟಿಕೆಟ್ ನೀಡಿದೆ.

ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.