

ಸಭೆಯಲ್ಲಿ ಬೊಮ್ಮಾಯಿ, ಯಡಿಯೂರಪ್ಪ, ಕಟೀಲ್ ಹಾಗೂ ಕೇಂದ್ರ ನಾಯಕರು ಪ್ರತ್ಯೇಕವಾಗಿ ತಮ್ಮದೇ ಆದ ಅಭ್ಯರ್ಥಿಗಳ ಪಟ್ಟಿ ಮಂಡಿಸಿದ್ದು, ಒಂದೇ ಹೆಸರನ್ನು ಶಿಫಾರಸು ಮಾಡಲಾದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಿಗೆ ಅನುಮೋದನೆ ನೀಡಲಾಗಿದೆ
ನವದೆಹಲಿ(ಏ.09): ಪ್ರಸಕ್ತ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಭಾನುವಾರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಮೊದಲ ಹಂತದ ಪಟ್ಟಿ ಭಾನುವಾರ ರಾತ್ರಿ ಅಂತಿಮಗೊಳ್ಳಲಿದೆ. ಹೀಗಾಗಿ, ಇಂದು(ಭಾನುವಾರ) ರಾತ್ರಿ ಅಥವಾ ನಾಳೆ(ಸೋಮವಾರ) ಬೆಳಗ್ಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಈ ಮಧ್ಯೆ, ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ಜೆ.ಪಿ.ನಡ್ಡಾ ನಿವಾಸದಲ್ಲಿ ಶನಿವಾರ ತಡರಾತ್ರಿವರೆಗೂ ಮೊದಲ ಹಂತದ ಸಭೆ ನಡೆಯಿತು. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗಿಯಾಗಿದ್ದರು.

ಶನಿವಾರದ ಸಭೆಯಲ್ಲಿ ಬೊಮ್ಮಾಯಿ, ಯಡಿಯೂರಪ್ಪ, ಕಟೀಲ್ ಹಾಗೂ ಕೇಂದ್ರ ನಾಯಕರು ಪ್ರತ್ಯೇಕವಾಗಿ ತಮ್ಮದೇ ಆದ ಅಭ್ಯರ್ಥಿಗಳ ಪಟ್ಟಿ ಮಂಡಿಸಿದ್ದು, ಒಂದೇ ಹೆಸರನ್ನು ಶಿಫಾರಸು ಮಾಡಲಾದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಿಗೆ ಅನುಮೋದನೆ ನೀಡಲಾಗಿದೆ. ಈ ಸಂಬಂಧ ಇಂದು ಸಂಜೆ 5 ಗಂಟೆಗೆ ನಡೆಯುವ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಭಾನುವಾರದ ಸಭೆಯಲ್ಲಿ ಪ್ರಧಾನಿ ಮೋದಿ ಕೂಡ ಪಾಲ್ಗೊಳ್ಳಲಿದ್ದಾರೆ. ಮೊದಲ ಪಟ್ಟಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಇರಲಿದೆ. ಕೆಲವು ಹಾಲಿ ಶಾಸಕರನ್ನು ಮೊದಲ ಪಟ್ಟಿಯಿಂದ ಕೈಬಿಟ್ಟು ಎರಡನೇ ಪಟ್ಟಿಗೆ ಪರಿಗಣಿಸಬಹುದು. 8-9 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಅಭ್ಯರ್ಥಿಗಳ ಆಯ್ಕೆ ವೇಳೆ ಗಣ್ಯರ ಶಿಫಾರಸುಗಳ ಬದಲಿಗೆ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
