

ನ್ಯೂಯಾರ್ಕ್: ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಖ್ಯಾತರಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಖ್ಯಾತ ಟೈಮ್ ನಿಯತಕಾಲಿಕೆ ಬಿಡುಗಡೆಗೊಳಿಸಿರುವ 2023ರ 100 ಪ್ರಭಾವಿಗಳ ಪಟ್ಟಿಯಲ್ಲಿ ಅವರು ವಿಶ್ವದಲ್ಲೇ ಅಗ್ರಸ್ಥಾನ ಪಡೆದಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ನಟ ಮೈಕೆಲ್ ಯೋಹ್, ಟೆನಿಸ್ ದಂತಕಥೆ ಸೆರೆನಾ ವಿಲಿಯಮ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬುರ್ಗ್ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಿ ಸಿಲ್ವಾ, ವಿಶ್ವಕಪ್ ಫುಟ್‌ಬಾಲ್ ದಂತಕಥೆ ಲಯೋನೆಲ್ ಮೆಸ್ಸಿಯನ್ನೂ ಹಿಂದಿಕ್ಕಿ ಶಾರುಖ್ ಅಗ್ರಸ್ಥಾನಕ್ಕೆ ಏರಿದ್ದಾರೆ.
ಈ ಸಮೀಕ್ಷೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಟೈಮ್ ಓದುಗರು ಭಾಗವಹಿಸಿದ್ದರು. ಈ ಪೈಕಿ ಶೇ.4ರಷ್ಟು ಮಂದಿ ಶಾರುಖ್ ಪರವಾಗಿ ಮತ ಹಾಕಿದ್ದಾರೆ. ಟೈಮ್ ಪ್ರಭಾವಿಗಳ ಪಟ್ಟಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಇರಾನಿಯನ್ ಮಹಿಳೆಯರು ಎರಡನೇ ಸ್ಥಾನ ಪಡೆದಿದ್ದಾರೆ. ಆರೋಗ್ಯ ಸೇವಾ ಕಾರ್ಯಕರ್ತರು ಮೂರನೇ ಸ್ಥಾನ ಗಳಿಸಿದ್ದು, ಶೇ.2ರಷ್ಟು ಓದುಗರು ಇವರ ಪರವಾಗಿ ಮತ ಹಾಕಿದ್ದಾರೆ. ಪ್ರಿನ್ಸ್ ಹ್ಯಾರಿ ಮತ್ತು ಮೆಘಾನ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇವರು ಶೇ.1.9ರಷ್ಟು ಮತಗಳನ್ನು ಗಳಿಸಿದ್ದಾರೆ

100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಾರುಖ್ ಖಾನ್, ನಾಲ್ಕು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಪುನಃ 2023ರಲ್ಲಿ “ಪಠಾಣ್’ ಸಿನಿಮಾ ಮೂಲಕ ಭರ್ಜರಿ ರಿಎಂಟ್ರಿ ನೀಡಿದರು. ನಟಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟನೆಯ ಈ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ 1000 ಕೋಟಿ ರೂ. ಮೀರಿದೆ. ಇದೇ ವೇಳೆ ಶಾರುಖ್ ಖಾನ್ ಕೋಲ್ಕತ ನೈಟ್ ರೈಡರ್ ಐಪಿಎಲ್ ಕ್ರಿಕೆಟ್ ತಂಡದ ಸಹ ಮಾಲಿಕರಾಗಿದ್ದಾರೆ.
