

ವಿಜಯಪುರ. ಎ.6: ಕುತೂಹಲ ಕೆರಳಿಸಿದ್ದ ವಿಜಯಪುರ ನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಬ್ದುಲ್ ಹಮೀದ್ ಮುಶ್ರೀಫ್ ಅವರನ್ನೇ ಕಣಕ್ಕಿಳಿಸಿದೆ.
ಕಳೆದ ಬಾರಿ ಅಬ್ದುಲ್ ಹಮೀದ್ ಮುಶ್ರೀಫ್ ಸುಮಾರು 6000 ಮತಗಳಿಂದ ಬಸನಗೌಡ ಪಾಟೀಲ್ ಯತ್ನಾಳ್ ಎದುರು ಸೋತಿದ್ದರು . ಕ್ಷೇತ್ರದಲ್ಲಿ ಈಗಲೂ ಸಕ್ರಿಯವಾಗಿರುವ ಮುಶ್ರೀಫ್ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದಾರೆ. ತಮ್ಮ ಸಾಮಾಜಿಕ ಚಟುವಟಿಕೆಗಳಿಂದಲೇ ಮನೆಮಾತಾಗಿದ್ದಾರೆ.

ಕ್ಷೇತ್ರದಲ್ಲಿ ಬಿಜೆಪಿಯ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆಯ ಮೂಲಕ ಕೃಷ್ಣಾ ನದಿ ತೀರದ ಮತದಾರರನ್ನು ತನ್ನತ್ತ ಸೆಳೆದುಕೊಂಡಿತ್ತು. ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ಡಾ ಮಕ್ಬೂಲ್ ಬಾಗವಾನ, ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಯತ್ನಾಳರಿಗೆ ಸೋಲುಣಿಸಿದ್ದರು. ಈ ಸಲವೂ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು.

ಕಾಂಗ್ರೆಸ್ ಈ ಬಾರಿ ಮುಸ್ಲಿಮ್ ಮತಗಳ ಜೊತೆಗೆ ಉಳಿದ ಸಮುದಾಯಗಳ ಮತಗಳನ್ನು ಸೆಳೆಯಬಲ್ಲಂತಹ ಅಭ್ಯರ್ಥಿಯನ್ನು ಹುಡುಕುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ಕೈ ತಪ್ಪಬಹುದು ಎಂದು ಹೇಳಲಾಗುತ್ತಿತ್ತು.
ಆದರೆ ಕೊನೆಗೂ ಬಿಜೆಪಿಯ ಯತ್ನಾಳ್ ಎದುರು ಮತ್ತೆ ಸ್ಪರ್ಧಿಸಲು ಅಬ್ದುಲ್ ಹಮೀದ್ ಮುಶ್ರೀಫ್ ಅವರಿಗೇ ಟಿಕೆಟ್ ಸಿಕ್ಕಿದೆ.
