

ಡ್ರೈವರ್ ಇದ್ರೀಶ್ ಪಾಶಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರನ್ನು ಬಂಧಿಸಿ ಎಂದು ತೀವ್ರ ಒತ್ತಡ ಕೇಳಿ ಬಂದಿದೆ. ಕೊಲೆ ನಡೆದು ನಾಲ್ಕು ದಿನಗಳಾದರೂ ಬಂಧಿಸದೇ ಅವರನ್ನು ರಕ್ಷಿಸುತ್ತಿರುವವರು ಯಾರು ಎಂದು ಬಹುತ್ವ ಕರ್ನಾಟಕ ಮತ್ತು ಕಾಂಗ್ರೆಸ್ ಪಕ್ಷ ಪ್ರಶ್ನಿಸಿವೆ.
ಇದ್ರೀಶ್ ಪಾಶಾ ಕೊಲೆ ಪರಿಸ್ಥಿತಿಗೆ ಕಾರಣವಾದ ಕರ್ನಾಟಕ ಪೊಲೀಸ್ ಮತ್ತು ಕರ್ನಾಟಕ ಸರ್ಕಾರದ ನಿಷ್ಕ್ರಿಯತೆಯನ್ನು ನಾವು ಖಂಡಿಸುತ್ತೇವೆ! ಗೋ ರಕ್ಷಣೆಗೆ ಸಂಬಂಧಿಸಿದ ತೆಹಸೀನ್ ಪೂನಾವಾಲಾ ಪುಕರಣದಲ್ಲಿ ಕರ್ನಾಟಕ ಸರ್ಕಾರ ತಕ್ಷಣವೇ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು. ಪುನೀತ್ ಕೆರೆಹಳ್ಳಿ, ಬಹಿರಂಗವಾಗಿ ವಿಡಿಯೋ ಹೇಳಿಕೆಗಳನ್ನು ನೀಡುತ್ತಿದ್ದರೂ ಇನ್ನೂ ಯಾಕೆ ಬಂಧಿಸಿಲ್ಲ? ಅವನನ್ನು ರಕ್ಷಿಸುವವರು ಯಾರು? ಎಂದು ಬಹುತ್ವ ಕರ್ನಾಟಕ ಸಂಘಟನೆ ಪ್ರಶ್ನಿಸಿದೆ.

ಪುನೀತ್ ಕೆರೆಹಳ್ಳಿ ಮತ್ತು ಇತರ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ, ಬಜರಂಗದಳ, ರಾಷ್ಟ್ರ ರಕ್ಷಣಾ ವೇದಿಕೆ ಮತ್ತು ಇತರರು ಕಾನೂನನ್ನು ಕೈಗೆ ತೆಗೆದುಕೊಂಡಿರುವುದರ ಕುರಿತು ಹಾಲಿ ಹೈ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಬಹಳ ಮುಖ್ಯವಾಗಿ, ಪೋಲೀಸರ ನಿಷ್ಕ್ರಿಯತೆ ಗಮನಿಸಬೇಕು. ರಾಜ್ಯ ಸರ್ಕಾರದ ನಿಷ್ಕ್ರಿಯತೆಯೇ ಈ ಪರಿಸ್ಥಿತಿಗೆ ಲಿಂಚಿಂಗ್‌ನ ಎಲ್ಲಾ ಸಂತ್ರಸ್ತರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ.
ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರನ್ನು ಬಂಧಿಸುವಲ್ಲಿ ವಿಫಲರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಬೇಕು ಮತ್ತು ತರಾತುರಿಯಲ್ಲಿ ಹೊರತಂದಿರುವ, ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾದ ಕರ್ನಾಟಕ ಪ್ರಿವೆನೈನ್ ಆಫ್ ಸ್ಲಾಟರ್ ಅಂಡ್ ಪ್ರಿಸರ್ವೇಶನ್ ಆಫ್ ಕ್ಯಾಟಲ್ ಕಾಯಿದೆ 2021 ಯನ್ನು ಹಿಂಪಡೆಯಿರಿ ಎಂದು ಒತ್ತಾಯಿಸಲಾಗಿದೆ.

ಜಾನುವಾರು ವ್ಯಾಪಾರಿಯನ್ನು ಕೊಲೆ ಮಾಡಿದ್ದೂ ಅಲ್ಲದೆ, ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕುವ ಕೊಲೆಗಡುಕನ ಧೈರ್ಯದ ಹಿಂದಿನ ಕಾರಣವೇನು? ಗೃಹಸಚಿವರು ಕೊಲೆ ಆರೋಪಿಯನ್ನು ತಮ್ಮದೇ ಮನೆಯಲ್ಲಿಟ್ಟುಕೊಂಡು ವಿಡಿಯೋ ಮೂಲಕ ಸಿದ್ದರಾಮಯ್ಯ ಅವರಿಗೆ ಬೆದರಿಕೆ ಹಾಕಿಸುತ್ತಿದ್ದಾರೆಯೇ? ಆರಗ ಜ್ಞಾನೇಂದ್ರರವರೆ ಕೊಲೆ ಆರೋಪಿಯ ರಕ್ಷಣೆಗೆ ನಿಂತಿರುವರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ನನ್ನ ಕ್ಷೇತ್ರ ವ್ಯಾಪ್ತಿಯ ಸಾತನೂರಿನಲ್ಲಿ ಮತೀಯ ಗೂಂಡಾಗಿರಿಯ ಭಾಗವಾಗಿ ಒಬ್ಬನ ಕೊಲೆಯಾಗಿದೆ. ಈ ಕೊಲೆಗೆ ಕಾರಣರಾದ ವ್ಯಕ್ತಿ ಬಿಜೆಪಿ ನಾಯಕರ ಆಪ್ತನಾಗಿದ್ದಾನೆ. ಈ ಹತ್ಯೆಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಹೊಣೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
‘‘ಈ ಕೊಲೆಗೆ ಸರ್ಕಾರವೇ ಕಾರಣ. ಹೊಣೆ ಹೊತ್ತು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು. ಅಲ್ಪಸಂಖ್ಯಾತರು ಬದುಕಲು ಅವಕಾಶ ಮಾಡಿಕೊಡಬೇಕು. ಚುನಾವಣೆ ಸಮಯದಲ್ಲಿ ಇಂತಹ ಗೊಂದಲ ಮಾಡುವುದು ಸರಿಯಲ್ಲ. ಈ ಹತ್ಯೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ಮೃತನ ಕುಟುಂಬಕ್ಕೆ ಸರ್ಕಾರ ಕೂಡಲೇ 25 ಲಕ್ಷ ರೂ ಪರಿಹಾರ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.