

ಬೆಂಗಳೂರು: ಕರ್ನಾಟಕ ಚುನಾವಣೆ (Karnataka Assembly Elections 2023) ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಮತದಾರರ ಮನೆಮನೆಗೆ ಡಿಡಿ ಕಳುಹಿಸುತ್ತಿದ್ದ ಕೋಟಿ ಕುಬೇರ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು (KGF Babu) ಅವರಿಗೆ ಸಿದ್ದಾಪುರ ಠಾಣಾ ಪೊಲೀಸರು ಶಾಕ್ ನೀಡಿದ್ದಾರೆ. ಡಿಡಿ ಕಳುಹಿಸುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಪೊಲೀಸರು, ಸುಮಾರು 30 ಲಕ್ಷದ ಡಿಡಿಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಠಾಣಾ ವ್ಯಾಪ್ತಿಯ ಕೆ.ಎಂ.ಕಾಲೋನಿಯಲ್ಲಿ 3 ಸಾವಿರ ಜನರಿಗೆ ತಲಾ 1,105 ರೂ.ನಂತೆ ಡಿಡಿ ನೀಡಲಾಗಿತ್ತು. ಜನರನ್ನು ಗಂಪು ಕಟ್ಟಿಕೊಂಡು ಡಿಡಿ ಹಂಚುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಡಿಡಿಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಜಿಎಫ್ ಬಾಬು ತಯಾರಿ ನಡೆಸಿದ್ದಾರೆ. ಈ ಮೊದಲು ಕೋಲಾರಿಂದ ಸ್ಪರ್ಧೆ ಮಾಡಬೇಕು ಎಂದು ಕೊಂಡಿದ್ದ ಬಾಬು ಬಳಿಕ ಅಲ್ಲಿಂದ ಬೆಂಗಳೂರಿನ ಚಿಕ್ಕಪೇಟೆಯಿಂದ ಅಖಾಡಕ್ಕಿಳಿಯಲು ಪ್ಲಾನ್ ಮಾಡಿದ್ದಾರೆ. ಇದರ ಮಧ್ಯೆ ಪಕ್ಷ ವಿರೋಧಿ ಆರೋಪದ ಮೇಲೆ ಕಾಂಗ್ರೆಸ್ನಿಂದ ಅಮಾನತುಗೊಂಡು ಏಕಾಂಗಿಯಾಗಿದ್ದಾರೆ. ಮೂಲಗಳ ಪ್ರಕಾರ ಪಕ್ಷೇತರ ಬದಲು ಜೆಡಿಎಸ್ನಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕಳೆದ ಮೇ ತಿಂಗಳಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಕೆಜಿಎಫ್ ಬಾಬು ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. 6 ಕಾರುಗಳಲ್ಲಿ 3 ತಂಡವಾಗಿ ಬಂದಿದ್ದ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಉದ್ಯಮಿ ಹಾಗೂ ರಾಜಕಾರಣಿ ಕೆಜಿಎಫ್ ಬಾಬು ನಿವಾಸ ಹಾಗೂ ಕಚೇರಿಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದ್ದರು. ಯೂಸೂಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬುಗೆ ಇಡಿ ಶಾಕ್ ನೀಡಿತ್ತು. ಬಾಬು ಒಡೆತನದ ಬಂಗಲೆ, ಕಚೇರಿ ಸೇರಿ 7 ಕಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದರು. ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳಿಗೆ ಕೆಲ ಸಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಬಾಬು ಒಡೆತನದ ವಸಂತನಗರದಲ್ಲಿರುವ ರುಕ್ಸಾನಾ ಪ್ಯಾಲೇಸ್ ನಿವಾಸ, ಉಮ್ರಾ ಡೆವಲರ್ಸ್, ಉಮ್ರಾ ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡಿದ್ದರು.
