

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇದೇ ಮೇ 10ರಂದು ಮತದಾನ ನಡೆಯಲಿದ್ದು, ಮೇ.13ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಈಗ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಚುನಾವಣೆ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದು, ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಬಿಗಿ ಮಾಡಿದ್ದಾರೆ. ಇದೀಗ ಆರ್ಟಿಓ (RTO) ಅಧಿಕಾರಿಗಳು ಸಹ ಅಲರ್ಟ್ ಆಗಿದ್ದು, ರಾಜಕೀಯ ನಾಯಕರ ಭಾವಚಿತ್ರ ಹಾಗೂ ಪಕ್ಷಗಳ ಚಿಹ್ನೆ ಇರುವ ವಾಹನಗಳ ಮೇಲೆ ಮೇಲೆ ನಿಗಾ ವಹಿಸಿದ್ದಾರೆ. ರಾಜಕೀಯ ನಾಯಕರು ಆಟೋಗಳ ಮೇಲೆ ಭಾವಚಿತ್ರ ಅಂಟಿಸಿ ಭಾರೀ ಪ್ರಚಾರ ಪಡೆಯುತ್ತಿದ್ದಾರೆ. ಹೀಗಾಗಿ ಇದನ್ನು ತಡೆಗಟ್ಟಲು RTO ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದಾರೆ.

ಚುನಾವಣಾ ಆಯೋಗದ ಸೂಚನೆಯಂತೆ ಕಟ್ಟೆಚ್ಚರ ವಹಿಸಿರುವ RTO ಅಧಿಕಾರಿಗಳು, ಮೆಜೆಸ್ಟಿಕ್ ಬಳಿಯ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿದರು. RTO ಜಂಟಿ ಆಯುಕ್ತ ಹಾಲಸ್ವಾಮಿ ರಾಜಾಜೀನಗರ RTO ಅಧಿಕಾರಿ ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ಪರಿಶೀಲನೆ ನಡೆದಿದ್ದು, ಆಟೋಗಳ ಮೇಲೆ ರಾಜಕೀಯ ಪ್ರೇರಿತ ಭಾವಚಿತ್ರ ಅಥವಾ ಚಿಹ್ನೆ ಇದ್ದರೆ 5 ಸಾವಿರ ರೂಪಾಯಿ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಯಾವುದೇ ವ್ಯಕ್ತಿಯ ಜಮೀನು, ಕಟ್ಟಡವನ್ನು ಅನುಮತಿಯಿಲ್ಲದೆ ಧ್ವಜಗಳು, ಬ್ಯಾನರ್‌ಗಳು, ಸೂಚನೆಗಳು ಮತ್ತು ಘೋಷಣೆಗಳನ್ನು ಬರೆಯಲು ಬಳಸಲು ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಮತ್ತು ಅವರ ಅನುಯಾಯಿಗಳಿಗೆ ಅನುಮತಿ ಇರುವುದಿಲ್ಲ. ಅಲ್ಲದೇ ಯಾವುದೇ ವಾಹನಗಳ ಮೇಲೆ ಪಕ್ಷದ ಚಿಹ್ನೆ, ಧ್ವಜ ಹಾಗೂ ಅಭ್ಯರ್ಥಿಗಳ ಭಾವಚಿತ್ರ, ಹೆಸರು ಹಾಕುವಂತಿಲ್ಲ. ಒಂದು ವೇಳೆ ಹಾಕುವುದಾದರೆ ಅಂತಹ ವಾಹನಗಳ ಸಂಖ್ಯೆ ನೀಡಿ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳಿಂದ ಪರವಾನಿಗೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಒಂದು ವೇಳೆ ಯಾವುದೇ ಪರವಾನಿಗೆ ಇಲ್ಲದೇ ವಾಹನಗಳ ಮೇಲೆ ಒಂದು ಪಕ್ಷದ ಚಿಹ್ನೆ, ಧ್ವಜ ಹಾಗೂ ಅಭ್ಯರ್ಥಿಗಳ ಫೋಟೋಗಳನ್ನು ಹಾಕಿಕೊಂಡಿದ್ದರೆ ಅದು ನೀತಿ ಸಂಹಿತಿ ಉಲ್ಲಂಘನೆ ಅಡಿಯಲ್ಲಿ ಅಪರಾಧವಾಗಿದ್ದು, ಆ ವಾಹನವನ್ನು ಪೊಲೀಸರು ಅಥವಾ ಚುನಾವಣಾಧಿಕಾರಿಗಳು ಸೀಜ್ ಮಾಡುವ ಅಧಿಕಾರ ಹೊಂದಿರುತ್ತಾರೆ. ಅಲ್ಲದೇ ದಂಡವೂ ಸಹ ವಿಧಿಸಬಹುದು.