

ಮಂಗಳೂರು: ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ -ಕಣ್ಣೂರಿಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆಗೆ ಎರಡೂ ಕಡೆಗಳಲ್ಲಿ ಗೇಟು ನಿರ್ಮಿಸಿ ಹಾಕಲಾಗಿದ್ದ ಬೀಗವನ್ನು ಆಕ್ರೋಶಿತ ಸಾರ್ವಜನಿಕರ ಸಹಕಾರದಿಂದ ಇಂದು ಮುಂಜಾನೆ ಡಿವೈಎಫ್‌ಐ ಕಾರ್ಯಕರ್ತರು ಒಡೆದು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದರೊಂದಿಗೆ ದ್ವಿಚಕ್ರ ಮತ್ತು ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳು ಸಂಚಾರ ಆರಂಭಿಸಿದೆ.


ಹತ್ತಾರು ನೆಪ ಹೇಳಿ ಮತ್ತೆ ಮುಂದೂಡಲಾಗಿತ್ತು. ಸೋಮವಾರ ಅಧಿಕಾರಿಗಳೇ ಕುಂಬಳಕಾಯಿಯೊಂದಿಗೆ ಹರೇಕಳಕ್ಕೆ ಬಂದಿದ್ದ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲು ಮುಂದಾದರೂ ನೀತಿ ಸಂಹಿತೆಯ ಗುಮ್ಮ ಕಾಡಿದ್ದರಿಂದ ಹಿಂದಕ್ಕೆ ಹೋಗಿದ್ದರು. ಇದರಿಂದ ಬೇಸತ್ತ ಹರೇಕಳ ಡಿವೈಎಫ್ಐ ಘಟಕದಿಂದ ನಿನ್ನೆ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಎ.3ರಂದು ವಾಹನಗಳ ಸಂಚಾರ ಆರಂಭಗೊಳ್ಳಲಿದೆ ಎಂದು ಹೇಳಲಾಗಿತ್ತು. ಅದೂ ಆಗದ ಕಾರಣ ಆಕ್ರೋಶಗೊಂಡ ಸ್ಥಳೀಯರ ಸಹಕಾರದಲ್ಲಿ ಡಿವೈಎಫ್‌ಐ ಮುಖಂಡರು ಇಂದು ಮುಂಜಾನೆ ಸೇತುವೆಯಲ್ಲಿ ಸಂಚರಿಸದಂತೆ ಹಾಕಲಾಗಿದ್ದ ಗೇಟನ್ನು ಬೀಗ ಮುರಿದು ತೆರವುಗೊಳಿಸಿದ್ದಾರೆ. ಅದರೊಂದಿಗೆ ಸಾರ್ವಜನಿಕರು ತಮ್ಮ ವಾಹನಗಳನ್ನು ಇನ್ನೂ ಅಧಿಕೃತವಾಗಿ ಉದ್ಘಾಟನೆಗೊಳ್ಳದ ಸೇತುವೆಯಲ್ಲಿ ಎರಡೂ ಕಡೆಯಿಂದಲೂ ಸಂಚಾರ ಆರಂಭಿಸಿದ್ದಾರೆ. ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್, ಉಳ್ಳಾಲ ತಾಲ್ಲೂಕು ಅಧ್ಯಕ್ಷ ರಫೀಕ್ ಹರೇಕಳ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.


