

ಮಂಗಳೂರು: ಖಾಸಗಿ ಬಸ್ ಢಿಕ್ಕಿ ಹೊಡೆದು ಹನ್ನೊಂದು ವರ್ಷದ ಬಾಲಕ ಅಸುನೀಗಿದ ಪ್ರಕರಣದ ನೆನಪು ಮಾಸುವ ಮುನ್ನ ಬೆಂದೂರ್ ವೆಲ್ ನಲ್ಲಿ ಮತ್ತೊಂದು ಅಪಘಾತ ನಡೆದಿದೆ. ಸರಿಪಲ್ಲದಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ವರೆಗೆ ತೆರಳುವ KA-19-AA-2282 – 4ಬಿ ಆಸ್ಲೆನ್ ಟ್ರಾವೆಲ್ಸ್ ಎಂಬ ಹೆಸರಿನ ಬಸ್ ಬೆಂದೂರುವೆಲ್ ವೃತ್ತದಲ್ಲಿ ಪ್ರಯಾಣಿಕರನ್ನು ಇಳಿಸಿ ಮುಂದಕ್ಕೆ ಹೋಗುವ ಯತ್ನದಲ್ಲಿ ಅದೇ ಬಸ್ಸಿನಿಂದ ಇಳಿದು ಹೋಗಿದ್ದ ಮಹಿಳೆಯ ಮೇಲೆ ಹರಿದು ಹೋಗಿದೆ.

ಐರಿನ್ ಡಿಸೋಜ(65) ಎಂಬ ಮಹಿಳೆ ಬಸ್ಸಿನಿಂದ ಇಳಿದು ರಸ್ತೆ ದಾಟಲೆಂದು ಬಸ್ಸಿನ ಮುಂಭಾಗದಿಂದ ತೆರಳುತ್ತಿದ್ದಾಗ ಬಸ್ ಚಾಲಕ ನೇರವಾಗಿ ಬಸ್ ಚಲಾಯಿಸಿದ್ದಾನೆ. ಮಹಿಳೆಯ ಮೇಲೆ ಬಸ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಸ್ ಚಾಲಕನನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂದೂರುವೆಲ್ ವೃತ್ತದಲ್ಲಿ ನಾಲ್ಕು ದಿನಗಳ ಹಿಂದೆ ಸ್ಕೂಟಿಯಲ್ಲಿ ಹೋಗುತ್ತಿದ್ದ ತಾಯಿ ಮತ್ತು ಮಗನ ಮೇಲೆ ಬಸ್ ಡಿಕ್ಕಿಯಾಗಿತ್ತು. ಹನ್ನೊಂದು ವರ್ಷದ ಮಗು ಸ್ಥಳದಲ್ಲೇ ದುರಂತ ಸಾವನ್ನಪ್ಪಿದ ಘಟನೆ ಹಸಿಯಾಗಿರುವಾಗಲೇ ಮತ್ತೊಂದು ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮಹಿಳೆ ಸ್ಥಳದಲ್ಲೇ ಅಸುನೀಗಿದ್ದಾರೆ. ಪರಾರಿಯಾಗಿರುವ ಬಸ್ ಬಗ್ಗೆ ಪೊಲೀಸರು ಸಿಸಿ ಟಿವಿ ದೃಶ್ಯ ಆಧರಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
