

ಗಾಂಧಿನಗರ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ (Bilkis Bano Case) 11 ಅಪರಾಧಿಗಳಲ್ಲಿ ಒಬ್ಬನಾದ ಶೈಲೇಶ್ ಭಟ್ ಜೊತೆ ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ (BJP MP) ಮತ್ತು ಸ್ಥಳೀಯ ಶಾಸಕ ವೇದಿಕೆ ಹಂಚಿಕೊಂಡಿರುವುದು ಸಾರ್ವಜನಿಕವಾಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ದಾಹೋದ್ ಜಿಲ್ಲೆಯ ಲಿಮ್ಖೇಡಾ, ಸಿಂಗ್ವಾಡ್ ಮತ್ತು ಝಲೋದ್ ತಾಲೂಕಿನ 64 ಹಳ್ಳಿಗಳಿಗೆ ಗುಜರಾತ್‌ನ (Gujarat) ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ 101.88 ಕೋಟಿ ರೂ. ವೆಚ್ಚದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಸಮಾರಂಭದಲ್ಲಿ ಬಿಜೆಪಿ ಸಂಸದ ಜಸ್ವಂತ್ ಸಿಂಗ್ ಭಾಭೋರ್, ಬಿಜೆಪಿ ಶಾಸಕ ಶೈಲೇಶ್ ಭಾಭೋರ್ ಅವರೊಂದಿಗೆ ಅಪರಾಧಿ ಶೈಲೇಶ್ ಭಟ್ ಮೊದಲ ಸಾಲಿನಲ್ಲೇ ಕುಳಿತಿದ್ದ ವೀಡಿಯೊ ಮತ್ತು ಚಿತ್ರಗಳು ಚರ್ಚೆಯನ್ನು ಹುಟ್ಟುಹಾಕಿವೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (Mahua Moitra) ಟ್ವೀಟ್ ಮಾಡಿ, ಬಿಜೆಪಿಗರನ್ನು ರಾಕ್ಷಸರು ಎಂದು ಟೀಕಿಸಿದ್ದಾರೆ. ನಾನು ಈ ರಾಕ್ಷಸರನ್ನ ಮತ್ತೆ ಜೈಲಿನಲ್ಲಿ ನೋಡಬಯಸುತ್ತೇನೆ ಎಂದಿದ್ದಾರೆ.
ಬಿಆರ್‌ಎಸ್ ಪಕ್ಷದ ಕೆಟಿಆರ್ ಅವರೂ ಕಿಡಿ ಕಾರಿದ್ದು, ಬಿಜೆಪಿಯನ್ನು ಬಲತ್ಕಾರ್ ಜಸ್ಟಿಫಿಕೇಷನ್ ಪಾರ್ಟಿ ಎಂದು ಜರೆದಿದ್ದಾರೆ. ಬಿಲ್ಕಿಸ್ ಬಾನೋ ರೇಪ್ ಪ್ರಕರಣದ ದೋಷಿಗಳ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡಿರೋದು ಆ ಪಕ್ಷದವರ ಮನಸ್ಥಿತಿ ಪ್ರತಿಬಿಂಬಿಸುತ್ತಿದೆ ಎಂದು ಟೀಕಿಸಿದ್ದಾರೆ. ಆದ್ರೆ, ವೇದಿಕೆ ಮೇಲೆ ಯಾರಿದ್ರೂ ಅನ್ನೋದು ನನಗೆ ಗೊತ್ತೇ ಇಲ್ಲ ಎಂದು ಹೇಳಿ ಬಿಜೆಪಿ ಶಾಸಕ ಶೈಲೇಶ್ ಜಾರಿಕೊಂಡಿದ್ದಾರೆ.

ಅತ್ಯಾಚಾರ ದೋಷಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಯಾರು ಅಂತಾ ಗೊತ್ತಿಲ್ಲ ಎಂದು ದಾಹೋದ್ ಜಿಲ್ಲಾಡಳಿತ ತಪ್ಪಿಸಿಕೊಳ್ಳಲು ನೋಡಿದೆ. ಈ ಬೆಳವಣಿಗೆ ನಡೆದಿರುವ ಹೊತ್ತಲ್ಲೇ, ಬಿಲ್ಕಿಸ್ ಬಾನೋ ಅತ್ಯಾಚಾರ ಅಪರಾಧಿಗಳನ್ನು ಯಾವ ಅಂಶಗಳ ಆಧಾರದ ಮೇಲೆ ಬಿಡುಗಡೆ ಮಾಡಿದ್ದೀರಿ ಎಂಬ ಬಗ್ಗೆ ದಾಖಲೆಗಳನ್ನು ಒದಗಿಸಲು ಸಜ್ಜಾಗಿ ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

2002ರ ಗುಜರಾತ್ ಗಲಭೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ, ಗುಜರಾತ್ ರಾಜ್ಯ ಮತ್ತು 11 ಅಪರಾಧಿಗಳಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠವು ನೋಟಿಸ್ ಜಾರಿಗೊಳಿಸಿದ್ದು, ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿದೆ.