

ನವದೆಹಲಿ (ಮಾ.27): ಇಸ್ರೇಲ್ ದೇಶ ತನ್ನ ಇತ್ತೀಚಿನ ಅತೀದೊಡ್ಡ ಪ್ರತಿಭಟನೆಗೆ ಸಾಕ್ಷಿಯಾಗಿದೆ. ನ್ಯಾಯಾಂಗ ಸುಧಾರಣೆಯನ್ನು ಖಂಡಿಸಿ ಸಾವಿರಾರರು ಜನರು ಟೆಲ್ಅವೀವ್ನ ಬೀದಿಗೆ ಇಳಿದಿದ್ದಾರೆ. ಇದರ ನಡುವೆ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ವಜಾ ಮಾಡಿದ ಬಳಿಕ ಇಸ್ರೇಲ್ನಲ್ಲಿ ಜನರ ಆಕ್ರೋಶ ಮುಗಿಲುಮುಟ್ಟಿದ್ದು ಬೀದಿಗೆ ಇಳಿದು ಪ್ರತಿಭಟನೆ ಮಾಡಲು ಆರಂಭಿಸಿದ್ದಾರೆ. ಇಸ್ರೇಲ್ ದೇಶದ ಧ್ವಜಗಳನ್ನು ಕೈಲಿ ಹಿಡಿದುಕೊಂಡು ರಸ್ತೆಗಳಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ತರಲು ಉದ್ದೇಶಿಸಿಉವ ನ್ಯಾಯಾಂಗ ಸುಧಾರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವೈದ್ಯರು, ಶಿಕ್ಷಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಇಸ್ರೇಲ್ನ ವಿಮಾನ ನಿಲ್ದಾಣದಿಂದ ಒಂದೇ ಒಂದು ವಿಮಾನ ಹೊರಹೋಗಲು ಸಾಧ್ಯವಾಗುತ್ತಿಲ್ಲ. ಇಸ್ರೇಲ್ನ ಅತಿದೊಡ್ಡ ಟ್ರೇಡ್ ಯೂನಿಯನ್ ಮುಖ್ಯಸ್ಥ ಐಸಾಕ್ ಹೆರ್ಜಾಗ್ ಈ ಮಾಹಿತಿಯನ್ನು ನೀಡಿದ್ದು, ಇಸ್ರೇಲ್ನ ಟೆಲ್ ಅವಿವ್ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಎಲ್ಲಾ ಜನರು ನೆತನ್ಯಾಹು ಸರ್ಕಾರದ ವಿರುದ್ಧ ಮುಷ್ಕರಕ್ಕೆ ಇಳಿದಿದ್ದಾರೆ. ಇದರಿಂದಾಗಿ ವಿಮಾನಗಳ ಟೇಕ್ ಆಫ್ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಹೊಸ ಸರ್ಕಾರ ಮತ್ತು ಇಸ್ರೇಲ್ ನ್ಯಾಯಮೂರ್ತಿಗಳ ಗಲಾಟೆಯ ನಡುವೆ, ನೆತನ್ಯಾಹು ಸರ್ಕಾರ ಪ್ರಜಾಪ್ರಭುತ್ವಕ್ಕೆ ಬೆದರಿಗೆ ಹಾಕುತ್ತಿದ್ದಾರೆ ಎಂದು ಪ್ರತಿಭಟನಕಾರರು ಹೇಳುತ್ತಿದ್ದಾರೆ.

ಇಸ್ರೇಲ್ನಲ್ಲಿ ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಗಳು ಸೋಮವಾರ ಮತ್ತೆ ತೀವ್ರ ಸ್ವರೂಕ್ಕೆ ಇಳಿದಿದೆ. ನೆತನ್ಯಾಹು ಅವರು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಸಚಿವ ಸ್ಥಾನದಿಂದ ಭಾನುವಾರ ವಜಾಗೊಳಿಸಿದ್ದಾರೆ. ದೇಶದ ನ್ಯಾಯಾಂಗವನ್ನು ದುರ್ಬಲಗೊಳಿಸಲು ತಂದಿರುವ ಮಸೂದೆ ಸೇನೆಯಲ್ಲೂ ಒಡಕು ಉಂಟು ಮಾಡುತ್ತಿದೆ ಎಂದು ಶನಿವಾರ ಟಿವಿ ಕಾರ್ಯಕ್ರಮವೊಂದರಲ್ಲಿ ಯೋವ್ ಹೇಳಿದ್ದರು. ಇದು ದೇಶದ ಭದ್ರತೆಗೆ ಧಕ್ಕೆ ತಂದಿದೆ. ಸರ್ಕಾರ ಪ್ರತಿಪಕ್ಷಗಳ ಜತೆ ಕುಳಿತು ಮಾತುಕತೆ ನಡೆಸಬೇಕು ಎಂದು ಹೇಳಿದ್ದರು.

ನೆತನ್ಯಾಹು ಮನೆಯ ಮುಂದೆ ಗಲಭೆ: ಲಕ್ಷಾಂತರ ಪ್ರತಿಭಟನಾಕಾರರು ಭಾನುವಾರ ಇಸ್ರೇಲ್ನಲ್ಲಿ ಬೀದಿಗಿಳಿದು ವಿವಾದಾತ್ಮಕ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ನೆತನ್ಯಾಹುಗೆ ಆಗ್ರಹಿಸಿದ್ದಾರೆ. ಪ್ರತಿಭಟನೆಯ ಸಮಯದಲ್ಲಿ, ಜನರು ಇಸ್ರೇಲ್ ರಾಜಧಾನಿ ಟೆಲ್ ಅವೀವ್ನ ಮುಖ್ಯ ಹೆದ್ದಾರಿಯನ್ನು ಕೂಡ ಬಂದ್ ಮಾಡಿದ್ದರು. ಇಸ್ರೇಲ್ ಜನರು ಭಾನುವಾರ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ಮನೆಯ ಹೊರಗೂ ಪ್ರತಿಭಟನೆ ನಡೆಸಿದ್ದಾರೆ. ಈ ಜನರೊಂದಿಗೆ ಪೊಲೀಸರು ವಾಗ್ವಾದ ನಡೆಸಿದರು. ಪ್ರತಿಭಟನಾಕಾರರು ಹೆದ್ದಾರಿಯಲ್ಲಿಯೇ ಟೈರ್ಗಳನ್ನು ಸುಟ್ಟಿದ್ದಾರೆ.
ನೆತನ್ಯಾಹು ಅವರು ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟುಮಾಡುವ ಎಲ್ಲಾ ಮಿತಿಗಳನ್ನು ದಾಟಿದ್ದಾರೆ ಎಂದು ಪ್ರತಿಭಟನಾಕಾರರೊಬ್ಬರು ಬಿಬಿಸಿಗೆ ತಿಳಿಸಿದರು. ಈ ವಿಷಯ ಹೆಚ್ಚುತ್ತಿರುವುದನ್ನು ಕಂಡು ಅಮೆರಿಕ ಕೂಡ ಇಸ್ರೇಲ್ ಕಾರ್ಯವೈಖರಿ ಬಗ್ಗೆ ಪ್ರತಿಕ್ರಿಯಿಸಿದೆ. ಶ್ವೇತಭವನದ ವಕ್ತಾರರು ಇಸ್ರೇಲ್ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕು ಎಂದು ಹೇಳಿದ್ದಾರೆ.
ಪ್ರತಿಭಟನೆಗೆ ಕಾರಣವೇನು?
– ಜನವರಿಯಲ್ಲಿ, ಇಸ್ರೇಲಿ ಸರ್ಕಾರವು ಸುಪ್ರೀಂ ಕೋರ್ಟ್ಗೆ ಸಂಬಂಧಿಸಿದಂತೆ ನಿರ್ಣಯವನ್ನು ಮಾಡಿತು. ಇದನ್ನು ಅಂಗೀಕರಿಸಿದರೆ, ಇಸ್ರೇಲ್ ಸಂಸತ್ತು ಸುಪ್ರೀಂ ಕೋರ್ಟ್ನ ನಿರ್ಧಾರಗಳನ್ನು ರದ್ದುಗೊಳಿಸುವ ಹಕ್ಕನ್ನು ಪಡೆಯುತ್ತದೆ. ಅದಕ್ಕೆ ‘ಓವರ್ರೈಡ್’ ಬಿಲ್ ಎಂದು ಹೆಸರಿಸಲಾಗಿದೆ. ಈಗ ಈ ಮಸೂದೆ ಅಂಗೀಕಾರವಾದರೆ ಸಂಸತ್ತಿನಲ್ಲಿ ಯಾರಿಗೆ ಬಹುಮತವಿದೆಯೋ ಅವರು ಸುಪ್ರೀಂ ಕೋರ್ಟ್ನ ತೀರ್ಪನ್ನು ರದ್ದುಪಡಿಸಲು ಸಾಧ್ಯವಾಗುತ್ತದೆ. ಇದು ದೇಶದ ಪ್ರಜಾಪ್ರಭುತ್ವ ಮತ್ತು ಸುಪ್ರೀಂ ಕೋರ್ಟ್ ಅನ್ನು ದುರ್ಬಲಗೊಳಿಸಲಿದೆ ಎಂದು ಜನರು ಹೇಳಿದ್ದಾರೆ.
