

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ (Delhi) ಸೋಮವಾರ ಭಾರೀ ಮಳೆಯಾಗುತ್ತಿದ್ದು (Heavy Rain), ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. 10 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. 7 ವಿಮಾನಗಳನ್ನು ಜೈಪುರಕ್ಕೆ, 3 ವಿಮಾನಗಳನ್ನು ಲಖನೌಗೆ ತೆರಳುವಂತೆ ಸೂಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ತಿಳಿಸಿದೆ. ದೆಹಲಿಯಲ್ಲಿ ಪ್ರತಿಕೂಲ ಹವಾಮಾನವು ಎಲ್ಲಾ ವಿಮಾನಗಳ ನಿರ್ಗಮನ/ ಆಗಮನದ ಮೇಲೆ ಪರಿಣಾಮ ಬೀರಬಹುದು. ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಲು ವಿನಂತಿಸಲಾಗಿದೆ ಎಂದು ಸ್ಪೈಸ್ಜೆಟ್ ಪ್ರಕಟಣೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ದೆಹಲಿಯಾದ್ಯಂತ ಮಂಜು ಮುಸುಕಿದ ಹಾಗೂ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ದೆಹಲಿಯ ಹಲವು ಪ್ರದೇಶಗಳಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದೆ. ಕನಿಷ್ಠ ತಾಪಮಾನ 17.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕೆಲವೆಡೆ ತುಂತುರು ಮಳೆಯಾಗಿದ್ದರೆ, ಕೆಲವೆಡೆ ಮಳೆ ಚುರುಕುಗೊಂಡಿದೆ. ಮಳೆಯಿಂದಾಗಿ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ದೆಹಲಿ ಮತ್ತು ನೋಯ್ಡಾದ ಕೆಲ ಪ್ರದೇಶಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗುಡುಗು, ಆಲಿಕಲ್ಲು ಸಹಿತ ಲಘು ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಪ್ರದೇಶದ ಹಲವೆಡೆಗಳಲ್ಲಿಯೂ ಸೋಮವಾರ ಮಳೆ ಸುರಿದಿದೆ.

ರಾಜಧಾನಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಭಾನುವಾರ ಆಲಿಕಲ್ಲು ಮಳೆಯಾಗಿತ್ತು. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕನಿಷ್ಠ ತಾಪಮಾನ 15.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಶನಿವಾರ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಮಳೆ ಮತ್ತು ಆಲಿಕಲ್ಲು ಮಳೆಯಾಗಿತ್ತು. ನಂತರ ತಾಪಮಾನದಲ್ಲಿ 5 ಡಿಗ್ರಿಯಷ್ಟು ಇಳಿಕೆ ದಾಖಲಾಗಿತ್ತು. ಇದು ಈ ತಿಂಗಳ ಕನಿಷ್ಠ ತಾಪಮಾನವಾಗಿದ್ದು, ಶನಿವಾರದಂದು ಹಲವು ಪ್ರದೇಶಗಳಲ್ಲಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು.
