

ರಾಮನಗರ: ಪ್ರಧಾನಿ ನರೇಂದ್ರ ಮೋದಿ(Narendra Modi) ಮಾರ್ಚ್ 12ರಂದು ಬಹು ನಿರೀಕ್ಷಿತ ಬೆಂಗಳೂರು-ಮೈಸೂರು ಹೈವೇ(Bengaluru-Mysuru Expressway) ಲೋಕಾರ್ಪಣೆ ಮಾಡಿದರು. ಮೋದಿ ಹೈವೇ ಉದ್ಘಾಟನೆ ಮಾಡಿದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹಕ್ಕೆ ಮುಂದಾಗಿದೆ. ಹೈವೇನಲ್ಲಿ ಸಂಚರಿಸುವ ಸವಾರರಿಗೆ ಇಂದಿನಿಂದಲೇ(ಮಾರ್ಚ್ 14) ಜೇಬಿಗೆ ಕತ್ತರಿ ಬೀಳಲಿದೆ. ಸುಮಾರು 55 ಕಿಲೋ ಮೀಟರ್ ಹೈವೇಗೆ ಬೆಳಗ್ಗೆ 8 ಗಂಟೆಯಿಂದ ಟೋಲ್ ಸಂಗ್ರಹಿಸಲು ನಿರ್ಧರಿಸಲಾಗಿದೆ.

ಇಂದಿನಿಂದ ಮೊದಲ ಹಂತದ ಟೋಲ್ ಸಂಗ್ರಹ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಟೋಲ್ ಸಂಗ್ರಹ ಮಾಡಲಾಗುತ್ತದೆ. ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹ ಮಾಡಾಗುತ್ತದೆ.

ಕಾರು, ಜೀಪು, ವ್ಯಾನ್ಗಳಿಗೆ ಏಕಮುಖ ಸಂಚಾರಕ್ಕೆ 135 ರೂಪಾಯಿ ದರ ನಿಗದಿಪಡಿಸಲಾಗಿದೆ.. ಎರಡೂ ಸೈಡ್ಗಾದ್ರೆ 205 ರೂಪಾಯಿ ನಿಗಧಿಪಡಿಸಲಾಗಿದೆ. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನ, ಮಿನಿ ಬಸ್ಗಳಿಗೆ ಏಕಮುಖ ಸಂಚಾರಕ್ಕೆ 220 ರೂಪಾಯಿ ಅದೇ ದಿನ ಮರುಸಂಚಾರಕ್ಕೆ 330 ನಿಗಧಿಪಡಿಸಿಲಾಗಿದೆ. ಬಸ್ ಅಥವಾ ಟ್ರಕ್ಗಳಿಗೆ ಏಕಮುಖ ಸಂಚಾರಕ್ಕೆ 460 ರೂಪಾಯಿ, ಎರಡೂ ಸೈಡ್ಗೆ 690 RuPaYI ದರ ನಿಗಧಿಪಡಿಸಲಾಗಿದೆ.
ಟೋಲ್ ಸಂಗ್ರಹ ವಿರೋಧಿಸಿ ಇಂದು ಪ್ರತಿಭಟನೆಗೆ ನಿರ್ಧಾರ
ಇನ್ನು ಈ ಹಿಂದೆ ಟೋಲ್ ಸಂಗ್ರಹಕ್ಕೆ ಮುಂದಾದಾಗ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಇಂದು ಕೂಡ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಟೋಲ್ ಪ್ಲಾಜಾಗಳಲ್ಲಿ ಸೂಕ್ತ ಪೊಲೀಸರ ಭದ್ರತೆ ಒದಗಿಸಲು ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ರಾಮನಗರ ಡಿಸಿ, ಎಸ್ ಪಿಗೆ ಮನವಿ ಮಾಡಿದ್ದಾರೆ. ಅದರಂತೆ 3 ಕೆಎಸ್ಆರ್ಪಿ ತುಕಡಿ, ಸ್ಥಳೀಯ ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ 200ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ. ಎಸ್ ಪಿ ಕಾರ್ತಿಕ್ ರೆಡ್ಡಿ, ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಟೋಲ್ ಸಂಗ್ರಹ ವಿರೋಧಿಸಿ ಇಂದು ಬೆಳಗ್ಗೆ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಧರಣಿಗೆ ಕರೆ ಹಿನ್ನೆಲೆ ಸವಾರರಿಗೆ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆಯಿದೆ.