

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಡ್ಯ ಹೆಲಿಪ್ಯಾಡ್ಗೆ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಗಾರ್ಲೆಂಡ್ ಮಾಡಿ ಸ್ವಾಗತಕೋರಿದರು. ಈ ವೇಳೆ ಬಿಜೆಪಿ ಮುಖಂಡರ ಜೊತೆ ಫೈಟರ್ ರವಿ (Fighter Ravi) ಸಹ ಮೋದಿ ಅವರಿಗೆ ಸ್ವಾಗತಕೋರಿದ್ದಾರೆ.
ಕಾಂಗ್ರೆಸ್ ಫೈಟರ್ ರವಿ ವಿಚಾರ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಇದೀಗ ಕಾಂಗ್ರೆಸ್ (Congress) ಮುಗಿಬಿದ್ದಿದೆ. ಮೋದಿ ಅವರು ಮಂಡ್ಯಗೆ ಬಂದಾಗ ಫೈಟರ್ ರವಿ ಸ್ವಾಗತ ಮಾಡುವ ಫೋಟೋ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಿದೆ.

ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವಿಲ್ಲ. ಫೈಟರ್ ರವಿ ಎಂಬ ರೌಡಿಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ಕಾಂಗ್ರೆಸ್ ಪೋಸ್ಟ್ ಮಾಡಿದೆ.

ಮೋದಿ ಸ್ವಾಗತಿಸಿದ ಫೈಟರ್ ರವಿ: ಮೋದಿ ಅವರು ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಿಂದ ಮಂಡ್ಯ ಪಿಇಎಸ್ ಹೆಲಿಪ್ಯಾಡ್ಗೆ ಹೆಲಿಕಾಪ್ಟರ್ನಲ್ಲಿ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಮೋದಿ ಅವರಿಗೆ ಗಾರ್ಲೆಂಡ್ ಮಾಡಿ ಸ್ವಾಗತಕೋರಿದರು. ಈ ವೇಳೆ ಬಿಜೆಪಿ ಮುಖಂಡರ ಜೊತೆ ಫೈಟರ್ ರವಿ ಸಹ ಮೋದಿ ಅವರಿಗೆ ಸ್ವಾಗತಕೋರಿದ್ದಾರೆ. ಈ ಹಿಂದೆ ಫೈಟರ್ ರವಿ ಬಿಜೆಪಿಗೆ ಸೇರ್ಪಡೆಯಾದ ವೇಳೆ ದೊಡ್ಡಮಟ್ಟದ ಸುದ್ದಿಯಾಗಿತ್ತು. ಅಲ್ಲದೇ ಕಾಂಗ್ರೆಸ್ ಬಿಜೆಪಿ ರೌಡಿಶೀಟರ್ಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯದಲ್ಲಿ ರೌಡಿ ರಾಜಕೀಯ ಮಾಡಲು ಮುಂದಾಗಿದೆ ಎಂದು ವಾಗ್ದಾಳಿ ಮಾಡಿತ್ತು.
