

ಮಂಡ್ಯ: ನರೇಂದ್ರ ಮೋದಿ (Nagendra Modi)ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿವಾದಿತ ಉರಿಗೌಡ ಹಾಗೂ ದೊಡ್ಡ ಮಂಜೇಗೌಡ (Uri Gowda And Dodda Nanjegowda Banner) ಮಹಾದ್ವಾರ ಎಂದು ಹಾಕಲಾಗಿದ್ದ ಬ್ಯಾನರ್ ತೆರವುಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ರೋಡ್ ಶೋ ನಡೆಸುವ ಮಾರ್ಗದಲ್ಲಿ ಉರಿಗೌಡ ಹಾಗೂ ದೊಡ್ಡ ಮಂಜೇಗೌಡ ಮಹಾದ್ವಾರ ಎಂದು ಕಟೌಟ್ ಹಾಕಲಾಗಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮಂಡ್ಯದಲ್ಲೇ ಇದಕ್ಕೆ ತೀವ್ರ ಆಕ್ರೋಶ, ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದ ಈ ವಿವಾದಿತ ಬ್ಯಾನರ್ ದ್ವಾರವನ್ನು ರಾತ್ರೋ ರಾತ್ರಿ ತೆರವುಗೊಳಿಸಲಾಗಿದೆ. ಈ ಸ್ಥಳದಲ್ಲಿ ಬಾಲಗಂಗಾಧರನಾಥ್ ಸ್ವಾಮೀಜಿ ಮಹಾದ್ವಾರ ಎಂದು ಬ್ಯಾನರ್ ಹಾಕಲಾಗಿದೆ.

ಮಂಡ್ಯದ ಗೆಜ್ಜಲಗೆರೆಯಲ್ಲಿ ನರೇಂದ್ರ ಮೋದಿಅ ಅವರು ಇಂದು (ಮಾ.12) ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇ ಉದ್ಘಾಟಿಸಲಿದ್ದಾರೆ. ಅಲ್ಲದೇ ನಗರ ವ್ಯಾಪ್ತಿಯಲ್ಲಿ 1.8 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಗದುದ್ದಕ್ಕೂ ಕಟೌಟ್ಗಳಿಂದ ನಾಲ್ಕು ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ರೋಡ್ ಶೋ ಆರಂಭವಾಗುವ ಪ್ರವಾಸಿ ಮಂದಿರದ ಬಳಿ ಸರ್.ಎಂ. ವಿಶ್ವೇಶ್ವರಯ್ಯ, ಜೆಸಿ ವೃತ್ತದಲ್ಲಿ ಕೆಂಪೇಗೌಡ, ಮಹಾವೀರ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾದ್ವಾರ ಹಾಕಲಾಗಿದೆ. ಈ ಮೂರು ದ್ವಾರಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ನಾಲ್ಕನೇ ಮಹಾದ್ವಾರ ಫ್ಯಾಕ್ಟರಿ ಸರ್ಕಲ್ನಲ್ಲಿ ಉರಿಗೌಡ ಮತ್ತು ದೊಡ್ಡನಂಜೇಗೌಡ ಮಹಾದ್ವಾರಕ್ಕೆ ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

ಮಾಜಿ ಸಿದ್ದರಾಮಯ್ಯ ಅವರು ಸಹ ಈ ಬಗ್ಗೆ ಟ್ವೀಟ್ ಮಾಡಿ, ಸ್ವಾಗತಕ್ಕಾಗಿ ಕಪೋಲ ಕಲ್ಪಿತ ಪಾತ್ರಗಳಾದ ಉರಿಗೌಡ-ನಂಜೇಗೌಡ ಹೆಸರಿನ ಕಮಾನು ಹಾಕಿರುವುದು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಮಂಡ್ಯಕ್ಕೆ ಮಾತ್ರವಲ್ಲ ಇಡೀ ಕರ್ನಾಟಕದ ಜನತೆಗೆ ಮಾಡಿರುವ ಅವಮಾನ. ತಕ್ಷಣ ಮಧ್ಯೆ ಪ್ರವೇಶಿಸಿ ಈ ಸ್ವಾಗತ ಕಮಾನನ್ನು ಕಿತ್ತು ಹಾಕಿಸಬೇಕು ಎಂದು ಕರ್ನಾಟಕ ಬಿಜೆಪಿಗೆ ಟ್ಯಾಗ್ ಮಾಡಿ ಆಗ್ರಹಿಸಿದ್ದರು.
ಇನ್ನು ಉರಿಗೌಡ ಮತ್ತು ನಂಜೇಗೌಡರ ಹೆಸರಿನ ದ್ವಾರವನ್ನು ಸ್ವತಃ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಬೆಂಗಳೂರು- ಮೈಸೂರು ದಶಪಥಕ್ಕೆ ಮಂಡ್ಯದಲ್ಲಿ ಉರಿಗೌಡ ಮತ್ತು ನಂಜೇಗೌಡರ ಹೆಸರಿನ ದ್ವಾರ ನೋಡಿ ಕೆಲವರಿಗೆ ಉರಿ ಹತ್ತಿಕೊಂಡಿದೆ. ದ್ವಾರ ತೆಗೆಸುವಂತೆ ಆಗ್ರಹಿಸಿದ್ದಾರೆ. ನರಹಂತಕ , ಧರ್ಮಾಂಧ ಟಿಪ್ಪುವನ್ನು ಸೆದೆಬಡಿದ ಮಂಡ್ಯದ ವೀರರಿಗೆ ನಾಡ ಗೌರವ ಸಿಗುವುದನ್ನೂ ಇವರಿಂದ ಸಹಿಸಲಾಗುವುದಿಲ್ಲ ಎಂದು ಸಿದ್ದರಾಮಯ್ಯಗೆ ಟ್ಯಾಗ್ ಮಾಡಿದ್ದಾರೆ.
ರಾಜಕೀಯ ಲಾಭಕ್ಕಾಗಿ ಬಿಜೆಪಿ, ಟಿಪ್ಪು ಕೊಂದ ದೋಷವನ್ನು ಒಕ್ಕಲಿಗ ಸಮುದಾಯದ ತಲೆಗೆ ಕಟ್ಟಲು ಮುಂದಾಗಿದ್ದಾರೆ. ಕಾಲ್ಪನಿಕ ವ್ತಕ್ತಿಗಳನ್ನು ನಿಜ ಎಂದು ಬಣ್ಣಿಸುತ್ತಿದ್ದಾರೆ ಎಂದು ಹಲವು ಆಕ್ರೋಶಗೊಂಡಿದ್ದರು. ಇದರ ಬೆನ್ನಲ್ಲೇ ಉರಿಗೌಡ ಮತ್ತು ದೊಡ್ಡನಂಜೇಗೌಡ ಮಹಾದ್ವಾರವನ್ನು ತೆರವುಗೊಳಿಸಲಾಗಿದೆ.
ಉರಿಗೌಡ ಮತ್ತು ದೊಡ್ಡ ನಂಜೇಗೌಡರು ಟಿಪ್ಪು ಸುಲ್ತಾನ್ನನ್ನು ಕೊಂದರು ಎಂದು ಬಿಜೆಪಿ ನಾಯಕರು ಸಭೆ ಸಮಾರಂಭಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಆದರೆ, ಈ ಇಬ್ಬರು ವ್ಯಕ್ತಿಗಳು ಬದುಕಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಇತಿಹಾಸ ತಜ್ಞರು ತಿಳಿಸಿದ್ದರು. ಆದರೂ, ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್ನನ್ನು ರಾಜಕೀಯ ದಾಳ ಮಾಡಿಕೊಂಡಿದ್ದಾರೆ. ಗೌಡ ಸಮುದಾಯದ ಮಹಾನಾಯಕರಾದ ಉರಿಗೌಡ ಮತ್ತು ದೊಡ್ಡ ನಂಜೇಗೌಡರೇ ಟಿಪ್ಪುಅನ್ನು ಕೊಂದಿದ್ದಾಗಿ ವಾದ ಮಂಡಿಸುತ್ತಿದ್ದರು
ಒಟ್ಟಿನಲ್ಲಿ ಟಿಪ್ಪು ಸುಲ್ತಾನ್ನನ್ನು ಉರಿಗೌಡ ಮತ್ತು ನಂಜೇಗೌಡ ಕೊಂದಿದ್ದು ಎಂದು ಬಿಜೆಪಿ ನಾಯರು ಬಾಯಿ ಮಾತುಗಳಲ್ಲೇ ಹೇಳುತ್ತಿದ್ದರು. ಇದೀಗ ಅದನ್ನು ಕಟೌಟ್ ಮೂಲಕ ಮಹಾದ್ವಾರ ಹಾಕಿ ಮುಖಭಂಗಕ್ಕೀಡಾಗಿದ್ದಾರೆ.