

ಉಡುಪಿ ದೇಗುಲಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಮರು ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರಿಗೆ ನಟ ರಕ್ಷಿತ್ ಶೆಟ್ಟಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದು ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.
ಮಿಥುನ್ ರೈ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು. ಅದರ ಮುಂದುವರಿದ ಭಾಗವಾಗಿ ರಕ್ಷಿತ್ ಶೆಟ್ಟಿ ಅವರು ಮಿಥುನ್ ರೈ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ನಟ ರಕ್ಷಿತ್ ಶೆಟ್ಟಿ ತಮ್ಮ ಟ್ವೀಟರ್ ಖಾತೆಯಲ್ಲಿ ಮಿಥುನ್ ರೈ ಹೆಸರನ್ನು ಬಳಸದೇ ಪ್ರತಿಕ್ರಿಯಿಸಿದ್ದಾರೆ. “ಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಮಾಹಿತಿ ಇಲ್ಲದಿದ್ದರೆ ಸಾರ್ವಜನಿಕವಾಗಿ ನಾನ್ ಸೆನ್ಸ್ ರೀತಿ ಮಾತಾಡೋದು ಯಾಕೆ?” ಎಂದು ಪ್ರಶ್ನೆ ಮಾಡಿದ್ದಾರೆ.
ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಹಳೆಯ ವಿಡಿಯೊವೊಂದನ್ನು ಪ್ರದೀಶ್ ಶೆಟ್ಟಿ ಎಂಬವರು ರಕ್ಷಿತ್ ಶೆಟ್ಟಿಯವರಿಗೆ ಟ್ಯಾಗ್ ಮಾಡಿದ್ದು, “ರಕ್ಷಿತ್ ಶೆಟ್ರೆ ಜಾಸ್ತಿ ಯಾರಿಗೂ ಬಕೆಟ್ ಹಿಡಿಯೋಕೆ ಹೋಗ್ಬೇಡಿ ದೇವರು ಮೆಚ್ಚುವಂಥ ಕೆಲಸ ಮಾಡಿ ಅಷ್ಟು ಸಾಕು” ಎಂದು ಮನವಿ ಮಾಡಿದ್ದಾರೆ.
ಅದಕ್ಕೂ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. “ಉಡುಪಿ ನನ್ನ ಜನ್ಮಸ್ಥಳ. ಬಕೆಟ್ ಅಲ್ಲಾ ಟ್ಯಾಂಕರ್ ಹಿಡಿತೀನಿ. ಅವರು ಯಾವ ಭೂಮಿಯ ಬಗ್ಗೆ ಮಾತನಾಡುತ್ತಿದ್ದಾರೆಂಬುದು ಖಚಿತವಾಗಿಲ್ಲ. ಕಾರ್ ಸ್ಟ್ರೀಟ್ ನಲ್ಲಿರುವ ಜಮೀನು ಖಂಡಿತವಾಗಿಯೂ ಅಲ್ಲ. ಅನಂತೇಶ್ವರ ದೇವಸ್ಥಾನವು ಕೃಷ್ಣಮಠಕ್ಕಿಂತಲೂ ಹಳೆಯದು. ಚಂದ್ರಮೌಳೀಶ್ವರ ದೇವಸ್ಥಾನ ಇನ್ನೂ ಹಳೆಯದು” ಎಂದು ಪ್ರತಿಪಾದಿಸಿದ್ದಾರೆ.

ಕೋಮುಪ್ರಚೋದಿತ ವಿಚಾರಗಳಿಗೆ ನಟ ರಕ್ಷಿತ್ ಶೆಟ್ಟಿಯವರು ಪ್ರತಿಕ್ರಿಯೆ ನೀಡಿರುವುದು ಹಲವಾರ ಆಕ್ರೋಶಕ್ಕೆ ಕಾರಣವಾಗಿದೆ. ರಕ್ಷಿತ್ ಶೆಟ್ಟಿ ತಪ್ಪು ಸಂದೇಶ ನೀಡುತ್ತಿದ್ದಾರೆಂದು ಟೀಕೆಗಳು ವ್ಯಕ್ತವಾಗಿವೆ.
ಲೇಖಕರಾದ ಶ್ರೀನಿವಾಸ ಕಾರ್ಕಳ ಅವರು ಪ್ರತಿಕ್ರಿಯಿಸಿ, “ನಿಮಗೆ ಸ್ಪಷ್ಟತೆ ಇಲ್ಲದಿದ್ದರೆ ಅಸಂಬದ್ಧವಾಗಿ ಮಾತನಾಡುವುದೇಕೆ? ನೀವು ಇತಿಹಾಸಕಾರರೇ? ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಿಂತ ನೀವು ದೊಡ್ಡವರಾ?” ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ಹರ್ಮನ್ ಎಂಬವರು ಟ್ವೀಟ್ ಮಾಡಿದ್ದು, “ನಿಜ ರಕ್ಷಿತ್ ಶೆಟ್ಟಿಯವೇ, ಸಾರ್ವಜನಿಕ ವೇದಿಕೆಯಲ್ಲಿ ಏಕೆ ಅಸಂಬದ್ಧವಾಗಿ ಮಾತನಾಡುತ್ತಿದ್ದೀರಿ? ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿರುವುದು ಏಕೆ?” ಎಂದು ಕೇಳಿದ್ದಾರೆ. ಮುಂದುವರಿದು, “ಪೇಜಾವರ ಶ್ರೀಗಳು ಹೇಳುತ್ತಿರುವುದು ಸುಳ್ಳೆಂದು ನೀವು ಹೇಳುತ್ತೀರಾ?” ಎಂದು ಮತ್ತೊಂದು ಪ್ರಶ್ನೆ ಎತ್ತಿದ್ದಾರೆ.
ಮತ್ತಷ್ಟು ಮಂದಿ ರಕ್ಷಿತ್ ಶೆಟ್ಟಿ ಹೇಳಿಕೆಯು ಸರಿ ಇದೆ ಎಂದು ವಾದಿಸುತ್ತಿದ್ದಾರೆ. ಮಿಥುನ್ ರೈ ಅವರನ್ನು ಪರೋಕ್ಷವಾಗಿ ವಿರೋಧಿಸಿ ರಕ್ಷಿತ್ ಶೆಟ್ಟಿಯವರು ಹಾಕಿರುವ ಪೋಸ್ಟ್ ಪರ ವಿರೋಧದ ಚರ್ಚೆಗೆ ಅವಕಾಶ ನೀಡಿದೆ.