

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾರ್ಚ್ 12ರಂದು ಮಂಡ್ಯಕ್ಕೆ (Mandya) ಆಗಮಿಸಲಿದ್ದಾರೆ. ಮೋದಿ ಆಗಮನಕ್ಕೂ ಮುನ್ನವೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಂಡ್ಯದಿಂದ ಆಯ್ಕೆಯಾಗಿರುವ ಸಂಸದೆ ಸುಮಲತಾ ಅಂಬರೀಶ್(Sumalatha Ambareesh) ಬಿಜೆಪಿ ಸೇರುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಬಿಜೆಪಿ ಹೈಕಮಾಂಡ್ ಸಹ ಸಮಲತಾ ಅಂಬರೀಶ್ ಪಕ್ಷಕ್ಕೆ ಸೇರಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಸುಮಲತಾ ಕಮಲ ಮುಡಿಯುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಆದರೆ, ಸಂಸದೆ ಬಿಜೆಪಿ ಸೇರಲು ಬಹುದೊಡ್ಡ ತಾಂತ್ರಿಕ ಅಡಚಣೆ ಎದುರಾಗಿದೆ. ಯಾವುದಾದರೊಂದು ರಾಜಕೀಯ ಪಕ್ಷದಿಂದ ಆಯ್ಕೆಯಾದ ಸದಸ್ಯರು ರಾಜೀನಾಮೆ ನೀಡದೇ ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾದರೆ, ಅವರು ಅನರ್ಹಗೊಳ್ಳುತ್ತಾರೆ. ಅಲ್ಲದೇ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾದ ಸಂಸದರು ಒಂದು ವೇಳೆ ರಾಜಕೀಯ ಪಕ್ಷವೊಂದಕ್ಕೆ ಸೇರ್ಪಡೆಯಾದರೆ ಅನರ್ಹಗೊಳ್ಳುತ್ತಾರೆ.

ಹೌದು….ಇದೀಗ ಸುಮಲತಾ ಅಂಬರೀಶ್ ಅವರು ಸಹ ಪಕ್ಷೇತರ ಸಂಸದೆಯಾಗಿದ್ದು, ಇದೀಗ ಬಿಜೆಪಿ ಸೇರ್ಪಡೆಗೆ ತೀರ್ಮಾನಿಸಿದ್ದಾರೆ. ಆದ್ರೆ, ಮಂಡ್ಯ ಗೌಡ್ತಿ ಬಿಜೆಪಿ ಸೇರ್ಪಡೆ ಹಾದಿ ಅಷ್ಟು ಸುಲಭವಿಲ್ಲ. ಅವರಿಗೆ ಕಾನುನು ತೊಡಕು ಎದುರಾಗಲಿದೆ. ಸಂವಿಧಾನದ 10ನೇ ಷೆಡ್ಯೂಲ್ನಡಿ ಪಕ್ಷ ಸೇರಲು ಅವಕಾಶವಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದ 6 ತಿಂಗಳೊಳಗೆ ರಾಜಕೀಯ ಪಕ್ಷ ಸೇರಬೇಕು. 6 ತಿಂಗಳ ನಂತರ ಸೇರಿದರೆ ಸಂಸದ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಒಂದೇ ವೇಳೆ ರಾಜಕೀಯ ಪಕ್ಷ ಸೇರಬೇಕಿದ್ದರೆ ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದರಿಂದ ಈ ನಿರ್ಬಂಧವಿದೆ. ಹಾಗಾದ್ರೆ, ಭಾರತೀಯ ಸಂವಿಧಾನದ 10ನೇ ಷೆಡ್ಯೂಲ್ ನ ಪ್ಯಾರಾ (2) ಹಾಗೂ ಪ್ಯಾರಾ(3) ಏನು ಹೇಳುತ್ತೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಸಂವಿಧಾನದ 10ನೇ ಶೆಡ್ಯೂಲ್ನ ಪ್ಯಾರಾ (2),(3) ಹೇಳುವುದೇನು?
ಪ್ಯಾರಾ (2): ಸಂಸತ್ತಿನ ಯಾವುದೇ ಸದನದ ಸದಸ್ಯರಾಗಿ ರಾಜಕೀಯ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗದೇ ಸ್ವತಂತ್ರವಾಗಿ ಸ್ಪರ್ಧಿಸಿ ಆಯ್ಕೆಯಾಗುವ ಸದಸ್ಯರು ಯಾವುದಾದರೊಂದು ರಾಜಕೀಯ ಪಕ್ಷ ಸೇರಿದರೆ ಅನರ್ಹಗೊಳ್ಳುತ್ತಾರೆ.
ಪ್ಯಾರಾ (3): ಉಭಯ ಸದನಗಳ ಪೈಕಿ ಒಂದು ಸದನಕ್ಕೆ ನಾಮನಿರ್ದೇಶಿತ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸದಸ್ಯರು, ಹೀಗೆ ಆಯ್ಕೆಯಾದ 6 ತಿಂಗಳ ನಂತರ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡರೆ ಅವರು ಅನರ್ಹಗೊಳ್ಳುತ್ತಾರೆ.
ಸಂಸದೆ ಸುಮಲತಾ ವಿಚಾರದಲ್ಲಿ ಆಗಿರುವುದೂ ಇದೇ. ಸಂಸದೆಯಾಗಿ ಆಯ್ಕೆಯಾದ 6 ತಿಂಗಳೊಳಗೆ ಸುಮಲತಾ ಬಿಜೆಪಿ ಸೇರಿಲ್ಲ. ಆದರೆ ಈಗ ಅಧಿಕೃತವಾಗಿ ಬಿಜೆಪಿ ಸೇರಿದರೆ ಅವರು ತಮ್ಮ ಸಂಸದೆ ಸ್ಥಾನದಿಂದ ಅನರ್ಹಗೊಳ್ಳುವ ಭೀತಿ ಎದುರಿಸಬೇಕಾಗುತ್ತದೆ. ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬಿಜೆಪಿ ಸೇರಲು ಅಡ್ಡಿಯಿರುವುದಿಲ್ಲ. ಆದರೆ ಸ್ವತಂತ್ರ ಸಂಸದೆಯಾಗಿದ್ದುಕೊಂಡು ರಾಜಕೀಯ ಪಕ್ಷದ ಸದಸ್ಯೆಯಾಗುವುದು ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ ಪಕ್ಷಾಂತರ ನಿಷೇಧ ನಿಯಮಾವಳಿಯಂತೆ ಅನರ್ಹಗೊಳ್ಳುತ್ತಾರೆ. ಲೋಕಸಭೆಯ ಸ್ಪೀಕರ್ ಅನರ್ಹತೆ ಬಗ್ಗೆ ತೀರ್ಮಾನಿಸುತ್ತಾರೆ.
ಸುಮಲತಾ ಬಿಜೆಪಿ ಸೇರ್ಪಡೆಯಾಗಲು ಬಯಸಿದರೂ ಅಧಿಕೃತವಾಗಿ ಸೇರಲು ಸಾಧ್ಯವಿಲ್ಲ. ಬದಲಿಗೆ ಬಿಜೆಪಿಯನ್ನು ಬಾಹ್ಯವಾಗಿ ಬೆಂಬಲಿಸಬಹುದು. ರಾಜಕೀಯ ಪಕ್ಷದ ಸದಸ್ಯತ್ವ ಪಡೆಯುವಂತಿಲ್ಲ. ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿಯೂ ಸುಮಲತಾ ಭಾಗವಹಿಸುವಂತಿಲ್ಲ. ಭಾಗವಹಿಸಿದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳ್ಳುತ್ತಾರೆ. ಬಾಹ್ಯ ಬೆಂಬಲ ನೀಡಿದರೆ ಬಿಜೆಪಿ ಹೊರಡಿಸುವ ವಿಪ್ ಕೂಡಾ ಸುಮಲತಾರಿಗೆ ಅನ್ವಯವಾಗುವುದಿಲ್ಲ. ಅವರು ಸ್ವತಂತ್ರ ಸಂಸದೆಯಾಗಿ ಮುಂದುವರಿಯಬೇಕಾಗಲಿದೆ. ಇನ್ನು ಹೊಸಕೋಟೆಯಿಂದ ವಿಧಾನಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶರತ್ ಬಚ್ಚೇಗೌಡ ಕಾಂಗ್ರೆಸ್ ನ ಅಧಿಕೃತ ಸದಸ್ಯರಲ್ಲ. ಕಾಂಗ್ರೆಸ್ ಗೆ ಬಾಹ್ಯ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಸದಸ್ಯರಾಗಿದ್ದಾರೆಂದು ಅವರ ವಿರುದ್ಧ ಯಾರೂ ದೂರು ನೀಡಿಲ್ಲ. ಹೀಗಾಗಿ ಅವರು ಅನರ್ಹಗೊಂಡಿಲ್ಲ.
ಒಟ್ಟಿನಲ್ಲಿ ಸುಮಲಯಾ ಅಂಬರೀಶ್ ಬಿಜೆಪಿ ಸೇರ್ಪಡೆಗೆ ಕಾನೂನು ತೊಡಕು ಎದುರಾಗಲಿದ್ದು, ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ಅಥವಾ ಕೇವಲ ಈಗ ಸದ್ಯಕ್ಕೆ ಬಾಹ್ಯ ಬೆಂಬಲ ಘೋಷಿಸಿಸುತ್ತಾರಾ? ಎನ್ನುವುದು ನಾಳಿನ ಸುದ್ದಿಗೋಷ್ಠಿ ನಂತರ ತಿಳಿಯಲಿದೆ.