

ಬಂಟ್ವಾಳ/ ಹೊಸದಿಲ್ಲಿ: ನಂದಾವರದ ಕೆಲವು ಮನೆಗಳಿಗೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಬಿಹಾರದ ಪಟ್ನಾಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಸರ್ಫರಾಜ್ ನವಾಜ್ ಹಾಗೂ ಇಕ್ಬಾಲ್ ಎಂಬವರನ್ನು ಬಂಧಿಸಿದ್ದು, ಓರ್ವನನ್ನು ಬಂಧಿಸಿಲ್ಲ. ಮಾ. 5ರಂದು ನಂದಾವರಕ್ಕೆ ದಾಳಿ ನಡೆಸಿದ ಎನ್ಐಎ ತಂಡ ಒಟ್ಟು ನಾಲ್ವರು ಆರೋಪಿಗಳನ್ನು ವಿಚಾರಣೆ ನಡೆಸಿತ್ತು.

ಸಾಕಷ್ಟು ಸಮಯ ತೀವ್ರ ವಿಚಾರಣೆ ನಡೆಸಿದ ಬಳಿಕ ಮೂವರು ಆರೋಪಿಗಳ ಬಂಧನ ಪ್ರಕ್ರಿಯೆ ನಡೆಸಿ, ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಳಿಕ ಆರೋಪಿಗಳನ್ನು ತನ್ನ ಕಸ್ಟಡಿಗೆ ಪಡೆದ ಎನ್ಐಎ ತಂಡ ಹೆಚ್ಚಿನ ವಿಚಾರಣೆಯ ದೃಷ್ಟಿಯಿಂದ ಪಟ್ನಾಕ್ಕೆ ಕರೆದುಕೊಂಡು ಹೋಗಿರುವುದಾಗಿ ಮೂಲಗಳು ತಿಳಿಸಿದೆ.

ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಯ ಹಣಕಾಸಿನ ವ್ಯವಹಾರದ ಕುರಿತು ತನಿಖೆ ನಡೆಸಿದ ಸಂದರ್ಭದಲ್ಲಿ ನಂದಾವರದ ವ್ಯಕ್ತಿಯೊಬ್ಬನ ಖಾತೆಯಿಂದ ಈ ಆರೋಪಿಗಳ ಖಾತೆಗೆ ಹಣ ಜಮೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಆತನ ಬ್ಯಾಂಕ್ ಖಾತೆಯ ಕುರಿತು ಕಣ್ಣಿಟ್ಟು ಸಾಕಷ್ಟು ಮಾಹಿತಿ ಕಲೆ ಹಾಕಿಕೊಂಡು ನಂದಾವರದಲ್ಲಿ ಆತನ ಮನೆ ಮೇಲೆ ದಾಳಿ ನಡೆಸಿದೆ. ನಂದಾವರದ ದಾಳಿಯ ಪ್ರಕರಣದಲ್ಲಿ ಪ್ರಧಾನ ಆರೋಪಿ ಯಾರು ಎಂಬುದು ತಿಳಿದು ಬಂದಿಲ್ಲ. ಉಳಿದಂತೆ ಆತನಿಗೆ ನೆರವು ನೀಡಿರುವುದಕ್ಕೆ ಸಂಬಂಧಿಸಿ ಎನ್ಐಎ ಬಂಧನ ನಡೆಸಿದೆ ಎನ್ನಲಾಗಿದೆ.