

ಮಂಗಳೂರು (ಮಾ.7) : ಊಟದ ತಟ್ಟೆತೊಳೆಯುವ ವಿಚಾರದಲ್ಲಿ ಸ್ನೇಹಿತನ ಮೇಲೆ ನಡೆದ ಹಲ್ಲೆ ಸಾವಿನಲ್ಲಿ ಅಂತ್ಯವಾದ ಘಟನೆ ಮಂಗಳೂರಿನ ಮರವೂರಿನಲ್ಲಿ ಸಂಭವಿಸಿದೆ. ಸಂಜಯ್ ಸಾವಿಗೀಡಾದ ನತತೃಷ್ಟ. ಸುಹಾನ್ ಈತನನ್ನು ಕೊಲೆ ಮಾಡಿದ ಸ್ನೇಹಿತ.

ಸ್ನೇಹಿತರಾದ ರಾಜನ್, ಸಂಜಯ್ ಮತ್ತು ಸುಹಾನ್ ಮರವೂರು ಗ್ರಾಮದಲ್ಲಿರುವ ಕೊಸ್ಟಲ್‌ಗಾರ್ಡ್ ಸೈಟ್(Coastguard site)ನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದು, ಈ ಸೈಟ್‌ನ ಶೆಡ್ ಗಳಲ್ಲಿಯೇ ವಾಸಮಾಡಿಕೊಂಡಿದ್ದರು. ಭಾನುವಾರ ರಾತ್ರಿ ಊಟದ ತಟ್ಟೆತೊಳೆಯುವ ವಿಚಾರದಲ್ಲಿ ಸ್ನೇಹಿತರಾದ ಸಂಜಯ್ ಮತ್ತು ಸುಹಾನ್ ಯಾದವ್ ಗಲಾಟೆ ಪ್ರಾರಂಭಿಸಿದ್ದರು. ನಂತರ ಸುಹಾನ್, ಸಂಜಯ್‌ನನ್ನು ಉದ್ದೇಶಿಸಿ, ನಾನು ನಿನ್ನ ಮನೆಯ ಕೆಲಸದವನಲ್ಲ, ನನಗೆ ತಟ್ಟೆತೊಳೆಯಲು ಹೇಳುತ್ತಿಯಾ ಎಂದು ಕೆಟ್ಟದಾಗಿ ಬೈಯುತ್ತಾ ಕೈಯಿಂದ ಹಲ್ಲೆ ಮಾಡಿದ್ದನು. ಆಗ ರೂಮಿನಲ್ಲಿದ್ದ ಇತರೆ ಸ್ನೇಹಿತರು ಗಲಾಟೆಯನ್ನು ಬಿಡಿಸಿ ನಂತರ ತಟ್ಟೆಗಳಿಗೆ ಅನ್ನ ಬಡಿಸುತ್ತಿದ್ದಾಗ ಸುಹಾನ್ ಏಕಾಏಕಿ ಸಂಜಯ್ ಬಳಿ ಹೋಗಿ ನಿನ್ನನ್ನು ಸಾಯಿಸುತ್ತೇನೆ ಎಂದು ಹೇಳುತ್ತಾ ಬಲವಾಗಿ ಹಿಂದಕ್ಕೆ ದೂಡಿದ್ದನು. ಪರಿಣಾಮ ಸಂಜಯ್ ಹಿಮ್ಮುಖವಾಗಿ ಕೆಳಗಿ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದರು.
