

ನವದೆಹಲಿ: ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ (Nagaland), ತ್ರಿಪುರ (Tripura), ಮೇಘಾಲಯ (Meghalaya) ವಿಧಾನಸಭೆಗಳಿಗೆ ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ನಡೆಯುತ್ತಿದೆ. ಮೇಘಾಲಯದಲ್ಲಿ ಎನ್‌ಪಿಪಿ, ನಾಗಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಹಾಗೂ ತ್ರಿಪುರಾದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷ ಎನ್‌ಡಿಪಿಪಿ ಮುನ್ನಡೆ ಸಾಧಿಸಿದೆ. ಇನ್ನೆರಡು ರಾಜ್ಯಗಳಲ್ಲಿ ಈವರೆಗೂ ಯಾವುದೇ ಪಕ್ಷ ಇನ್ನೂ ಬಹುಮತದ ಗಡಿ ದಾಟಿಲ್ಲ.
ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಪ್ರಬಲ ಪ್ರತಿಸ್ಪರ್ಧಿ ಎಡಪಕ್ಷ-ಕಾಂಗ್ರೆಸ್ ಮೈತ್ರಿಗಿಂತ ಮುನ್ನಡೆ ಸಾಧಿಸಿದೆ. ಬಿಜೆಪಿ ಪ್ರಸ್ತುತ 28 ಸ್ಥಾನಗಳಲ್ಲಿ ಮುಂದಿದ್ದು, ಬಹುಮತಕ್ಕೆ 3 ಸ್ಥಾನಗಳಷ್ಟೇ ಬೇಕಿದೆ. ಅಲ್ಲದೇ ತಿಪ್ರಾ ಮೋಥಾ ಪಕ್ಷ 13 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಹಾಗೂ ಎಡಪಕ್ಷ ಮೈತ್ರಿಕೂಟ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಮೇಘಾಲಯದಲ್ಲಿ ಈವರೆಗೂ ಯಾವುದೇ ಪಕ್ಷ ಬಹುಮತ ಸಾಧಿಸಿಲ್ಲ. ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ 22 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಬಹುಮತಕ್ಕೆ 31 ಸ್ಥಾನ ಬೇಕಾಗಿದೆ.
ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಎನ್‌ಡಿಪಿಪಿ (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ) 60 ಸದಸ್ಯ ಬಲದ ವಿಧಾನಸಭೆಯಲ್ಲಿ 42 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ತ್ರಿಪುರಾದ 60 ವಿಧಾನಸಭಾ ಕ್ಷೇತ್ರಗಳಿಗೆ ಫೆ.16ರಂದು ಚುನಾವಣೆ ನಡೆದಿತ್ತು. ನಾಗಾಲ್ಯಾಂಡ್ (60) ಮತ್ತು ಮೇಘಾಲಯದ 59 ಕ್ಷೇತ್ರಗಳಿಗೆ ಫೆ.27ರಂದು ನಡೆದ ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ನಡೆಯುತ್ತಿದ್ದು, ಮತದಾರರ ಒಲವು ಯಾವ ಪಕ್ಷದ ಕಡೆಗೆ ಎಂಬ ಬಗ್ಗೆ ಮಧ್ಯಾಹ್ನದ ವೇಳೆ ಸ್ಪಷ್ಟ ಚಿತ್ರಣ ಸಿಗಲಿದೆ.