

ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಏರಿಕೆ ಆಗುತ್ತಿದೆ. ಹೋಟೆಲ್ ಮಾಲೀಕರ ಅಸೋಸಿಯೇಷನ್ ಕೂಡ ವಿರೋಧ ವ್ಯಕ್ತಪಡಿಸಿದೆ. ಸದ್ಯ ಈ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬೆಲೆ ಏರಿಕೆಯ ಬಿಸಿ ಮತ್ತೆ ದೇಶದ ಜನತೆಯನ್ನು ಸಂಕಷ್ಟಕ್ಕೆ ದೂಡಲಿದೆ. ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗೆ 50 ರೂಪಾಯಿ, ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ಗೆ 350.50 ರೂಪಾಯಿಗೆ ಹೆಚ್ಚಳವಾಗಿರುವ ಆಘಾತಕಾರಿ ಸುದ್ದಿ ವರದಿಯಾಗಿದೆ. ದೇಶದ ಆರ್ಥಿಕತೆಗೆ ಕಷ್ಟದಲ್ಲಿರುವಾಗ, ಜನತೆಯ ಜೇಬಿಗೆ ಕತ್ತರಿ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಬ್ಸಿಡಿ ನಿಂತಿರುವುದರಿಂದ ಗ್ರಾಮೀಣ ಭಾಗದ ಬಹಳಷ್ಟು ಮಹಿಳೆಯರು ಗ್ಯಾಸ್ ಸಿಲಿಂಡರ್ ಕೊಳ್ಳದೆ, ಮತ್ತೆ ಸೌದೆ ಬಳಕೆಗೆ ಹಿಂದಿರುಗಿದ್ದಾರೆ. ಇದೆ ವೇಳೆ ಮತ್ತೆ ಗೃಹ ಬಳಕೆಯ ಸಿಲಿಂಡರ್ ಬೆಲೆ ಏಕಾಏಕಿ ಏರಿಸಿದರೆ ಹೇಗೆ? ಕೇಂದ್ರ ಬಿಜೆಪಿ ಸರ್ಕಾರ ಯಾರಿಗಾಗಿ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ದೇಶದ ಜನರು ಹಣದುಬ್ಬರದಿಂದ ತತ್ತರಿಸುತ್ತಿದ್ದರೆ, ಪ್ರಧಾನಿ ಮೋದಿ ಮತ್ತವರ ಸಂಪುಟ ರಾಜ್ಯ ಚುನಾವಣೆಗಳಿಗಾಗಿ ಸುತ್ತುತ್ತಿದ್ದಾರೆ. ನಮ್ಮ ರಾಜ್ಯದ ಬಿಜೆಪಿ ಸರ್ಕಾರಕ್ಕಂತೂ ಮಾನ-ಮರ್ಯಾದೆ ಇಲ್ಲ. ತಮ್ಮದೇ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾರಣ ಎಲ್ಲವನ್ನೂ ಸಮರ್ಥಿಸುವ ಲಜ್ಜೆಗೇಡಿತನಕ್ಕೆ ಇಳಿದಿದ್ದಾರೆ.
