

ಬೆಂಗಳೂರು: 7ನೇ ವೇತನ ಆಯೋಗ (7th pay commission)ವರದಿ ಜಾರಿಗೆ ಮಾಡುವಂತೆ ಪಟ್ಟು ಹಿಡಿದು ಇಂದಿನಿಂದ (ಮಾರ್ಚ್ 01) ಮುಷ್ಕರ ನಡೆಸುತ್ತಿರುವ ತನ್ನ ನೌಕರರಿಗೆ (Karnataka Government Employees) ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ. ಅನುಮತಿ ಪಡೆಯದೇ ಕರ್ತವ್ಯಕ್ಕೆ ಗೈರಾದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೆಲಸಕ್ಕೆ ಗೈರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ನೌಕರರ ನಡೆಗೆ ಸುತ್ತೋಲೆಯ ಮೂಲಕ ಸರ್ಕಾರ ಎಚ್ಚರಿಕೆ ನೀಡಿದೆ. ಅನುಮತಿ ಪಡೆಯದೇ ಗೈರಾದರೆ ಯಾವುದೇ ಸರ್ಕಾರದ ಅಧಿಕೃತ ಕೆಲಸ ನಡೆದಿಲ್ಲ ಎಂದು ತೀರ್ಮಾನಿಸಲಾಗುತ್ತದೆ ಮತ್ತು ಶಿಸ್ತುಕ್ರಮದ ತೆಗೆದುಕೊಳ್ಳಲಾಗುತ್ತದೆ ಎಂದು ಸುತ್ತೋಲೆ ಹೊರಡಿಸಲಾಗಿದೆ.
ಸರ್ಕಾರದ ಸುತ್ತೋಲೆಯಲ್ಲೇನಿದೆ?
ಕಚೇರಿಯ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತಿಳಿಯಪಡಿಸುವುದೇನೆಂದರೆ, ಸರ್ಕಾರಿ ನೌಕರರು ಕಚೇರಿಗೆ ಅನಿವಾರ್ಯ ಕಾರಣಗಳಿಂದ ಹಾಜರಾಗಲು ಸಾಧ್ಯವಾಗದೇ ಇದ್ದಲ್ಲಿ ಮುಂಚಿತವಾಗಿ ಅಥವಾ ಅಧಿಕೃತವಾಗಿ ರಜೆ ಮಂಜೂರಾತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಪೂರ್ವಭಾವಿಯಾಗಿ ರಜೆ ಮಂಜೂರಾತಿ ಪಡೆಯದೆ ಕರ್ತವ್ಯಕ್ಕೆ ಗೈರು ಹಾಜರಾದಲ್ಲಿ Dies Non ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.

ವಿವಿಧ ಇಲಾಖೆಯ ಸುಮಾರು 10 ಲಕ್ಷ ರಾಜ್ಯ ಸರ್ಕಾರಿ ನೌಕರರು ಕರ್ತವವ್ಯಕ್ಕೆ ಹಾಜರಾಗದೆ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ಆಸ್ಪಯತ್ರೆಗಳಲ್ಲಿ ಓಪಿಡಿ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಇನ್ನು ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಆಗಮಿಸಿ ಶಿಕ್ಷಕರು ಇಲ್ಲದೇ ವಾಪಸ್ ಮನೆ ಹೋಗುತ್ತಿದ್ದಾರೆ. ಇನ್ನು ಪ್ರಥಮ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪೂರ್ವಭಾವಿ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ. ಮತ್ತೊಂದೆಡೆ ಕೆಲವೆಡೆ ನೌಕರರು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.