

ಮಂಗಳೂರು(ಫೆ.27): ಗಾಂಜಾ ಅಮಲಿನಲ್ಲಿ ಯುವಕರ ತಂಡವೊಂದು ರಿಕ್ಷಾ ಚಾಲಕನ ಮೇಲೆ ತಲವಾರು ಬೀಸಿದ ಘಟನೆ ಮಂಗಳೂರು ನಗರದ ಹೊರವಲಯದ ಚಿತ್ರಾಪುರ ಮೊಗವೀರ ಮಹಾಸಭಾ ವ್ಯಾಪ್ತಿಯ ಬೀಚ್ ಬಳಿ ನಿನ್ನೆ(ಭಾನುವಾರ) ನಡೆದಿದೆ.
ಗಾಂಜಾ ಅಮಲಿನಲ್ಲಿ ತಲವಾರು ಬೀಸಿದ ಪರಿಣಾಮ ರಿಕ್ಷಾ ಚಾಲಕ ಸುನೀಲ್‌ಗೆ ಗಾಯವಾಗಿದೆ. ಚಾಲಕನಿಗೆ ತಲವಾರು ಬೀಸಿದ ಪುಂಡರು ರಿಕ್ಷಾಗೆ ಹಾನಿ ಮಾಡಿದ್ದಾರೆ. ಈ ಸಂಬಂಧ ಓರ್ವನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ.

ಘಟನೆಯನ್ನ ಖಂಡಿಸಿದ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿದ್ದರು. ಮಾಹಿತಿ ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಬೀಚ್‍ನಲ್ಲಿ ಗಾಂಜಾ ಮಾರಾಟ, ಗಾಂಜಾ ಸೇವನೆ, ಅನೈತಿಕ ಚಟುವಟಿಕೆ ನಡೆಯುತ್ತಿದೆ. ಗ್ರಾಮಸ್ಥರು ಇದನ್ನ ವಿರೋಧಿಸಿ ಬೀಚ್‍ಗೆ ಬಾರದಂತೆ ಎಚ್ಚರಿಕೆ ನೀಡಿದ ದ್ವೇಷದಿಂದ ರಿಕ್ಷಾ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ ಅಂತ ಆರೋಪಿಸಲಾಗಿದೆ. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
